ವಾಷಿಂಗ್ಟನ್, ಏ. 08 (DaijiworldNews/TA): ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದ ಅಮೆರಿಕ-ಇರಾನ್ ಸಂಘರ್ಷದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಇರಾನ್ ಮೇಲೆ ನಿರ್ಧರಿಸಲಾಗಿದ್ದ ಭಾರೀ ಸೈನಿಕ ದಾಳಿಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಮನವಿಗೆ ಸ್ಪಂದಿಸಿದ ಟ್ರಂಪ್, ತುರ್ತು ರಾಜತಾಂತ್ರಿಕ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ದಾಳಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಬೆಳವಣಿಗೆ ಸಂಭವಿಸಿರುವುದು ಗಮನಾರ್ಹವಾಗಿದೆ.
ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಒಪ್ಪಿಗೆ : ಕಳೆದ ಐದು ವಾರಗಳಿಂದ ನಡೆದಿದ್ದ ಯುದ್ಧದ ಪರಿಣಾಮವಾಗಿ ಜಗತ್ತಿನ ತೈಲ ಸರಬರಾಜಿನ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಬಂದ್ ಆಗಿತ್ತು. ಇದೀಗ, ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಇರಾನ್ ಸಮ್ಮತಿಸಿದೆ. ಈ ನಿರ್ಧಾರವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ವ್ಯಾಪಾರಕ್ಕೆ ದೊಡ್ಡ ಮಟ್ಟದ ಪರಿಹಾರ ಒದಗಿಸುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು ಅಮೇರಿಕಾ, ಇರಾನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿತ್ತು. ಈ ಕ್ರಮ ಯುದ್ಧಾಪರಾಧವಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಹಾಗೂ ಪೋಪ್ ಆತಂಕ ವ್ಯಕ್ತಪಡಿಸಿದ್ದರು. ಈ ನಡುವೆ ಉದ್ಭವಿಸಿದ ಶಾಂತಿ ಪ್ರಯತ್ನಗಳು ಈಗ ಫಲ ನೀಡುತ್ತಿರುವಂತೆ ಕಾಣುತ್ತಿದೆ. ಇಸ್ರೇಲ್ ಕೂಡ ಈ ತಾತ್ಕಾಲಿಕ ಕದನ ವಿರಾಮಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.
ಇರಾನ್ ಅಮೆರಿಕ ಮುಂದಿಟ್ಟುಕೊಂಡಿರುವ ಶಾಂತಿ ಮಾತುಕತೆಗಾಗಿ 10 ಅಂಶಗಳ ಪ್ರಸ್ತಾವನೆಯನ್ನು ನೀಡಿದೆ. ಅದರ ಪ್ರಮುಖ ಅಂಶಗಳು ಇಂತಿವೆ:
* ಪರಸ್ಪರ ಆಕ್ರಮಣವಿಲ್ಲದಿರುವ ಬದ್ಧತೆ
* ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣ ಮುಂದುವರಿಕೆ
* ಯುರೇನಿಯಂ ಪುಷ್ಟೀಕರಣಕ್ಕೆ ಮಾನ್ಯತೆ
* ಎಲ್ಲಾ ಆರ್ಥಿಕ ನಿರ್ಬಂಧಗಳ ತೆರವು
* ಯುಎನ್ ಮತ್ತು ಐಎಇಎ ನಿರ್ಣಯಗಳ ಹಿಂಪಡೆತ
* ಜಲಸಂಧಿಯಿಂದ ಆದಾಯವನ್ನು ಪುನರ್ನಿರ್ಮಾಣಕ್ಕೆ ಬಳಕೆ
* ಇರಾನ್ಗೆ ಪರಿಹಾರ ಪಾವತಿ
* ಅಮೇರಿಕಾ ಸೈನ್ಯದ ಹಿಂತೆಗೆತ
* ಎಲ್ಲಾ ರಂಗಗಳಲ್ಲಿ ಯುದ್ಧ ನಿಲ್ಲಿಕೆ
* ಲೆಬನಾನ್ ಮೇಲೆ ಇಸ್ರೇಲ್ ದಾಳಿ ಸ್ಥಗಿತ
ಟ್ರಂಪ್ ತಮ್ಮ ಹೇಳಿಕೆಯಲ್ಲಿ, “ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಮತ್ತು ಪಾಕಿಸ್ತಾನದ ನಾಯಕತ್ವದ ಮನವಿಯನ್ನು ಗೌರವಿಸಿ, ನಾವು ಎರಡು ವಾರಗಳ ಕಾಲ ದಾಳಿಯನ್ನು ಸ್ಥಗಿತಗೊಳಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಅವರು ಮುಂದುವರಿಸಿ, “ನಾವು ಈಗಾಗಲೇ ನಮ್ಮ ಸೈನಿಕ ಗುರಿಗಳನ್ನು ಸಾಧಿಸಿದ್ದೇವೆ. ದೀರ್ಘಕಾಲೀನ ಶಾಂತಿ ಒಪ್ಪಂದದತ್ತ ನಾವು ಬಹಳ ಹತ್ತಿರದಲ್ಲಿದ್ದೇವೆ. ಈ ಎರಡು ವಾರಗಳು ಅಂತಿಮ ಒಪ್ಪಂದಕ್ಕೆ ದಾರಿ ಮಾಡಿಕೊಡಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ತಾತ್ಕಾಲಿಕ ಕದನ ವಿರಾಮವು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಹೆಜ್ಜೆಯಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಅಂತಿಮ ಒಪ್ಪಂದ ಸಾಧ್ಯತೆಗಳ ಮೇಲೆ ವಿಶ್ವದ ಗಮನ ಕೇಂದ್ರೀಕೃತವಾಗಿದೆ.