ಟೆಹ್ರಾನ್, ಏ. 07 (DaijiworldNews/AA): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನರಾಗಿದ್ದಾರೆ, ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೋಮ್ ನಗರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇರಾನ್ ಆಡಳಿತವು ಯುದ್ಧಕ್ಕೆ ಸಂಬಂಧಿಸಿದ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅಥವಾ ಜವಾಬ್ದಾರಿಗಳನ್ನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಮೂಲಗಳ ವರದಿ ತಿಳಿಸಿವೆ.
ಗುಪ್ತಚರ ಸಂಸ್ಥೆಗಳು ಕೋಮ್ ನಗರದಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿವೆ. ಕೋಮ್ನಲ್ಲಿ ಬೃಹತ್ ಸಮಾಧಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಇತರ ಕುಟುಂಬ ಸದಸ್ಯರನ್ನು ಅಲ್ಲಿ ಸಮಾಧಿ ಮಾಡಲು ಸಿದ್ಧತೆಗಳು ನಡೆಯುತ್ತಿರಬಹುದು ಎಂದು ಹೇಳಲಾಗಿದೆ.