ವಾಷಿಂಗ್ಟನ್, ಏ. 05 (DaijiworldNews/TA): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೊರ್ಮಜ್ ಜಲಸಂಧಿಯನ್ನು ತೆರೆಯಲು 48 ಗಂಟೆಗಳ ಗಡುವು ನೀಡಿರುವ ಅವರು, ಏಪ್ರಿಲ್ 6ರ ರಾತ್ರಿ 8 ಗಂಟೆಯೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

“ಒಪ್ಪಂದಕ್ಕೆ ಬನ್ನಿ ಅಥವಾ ಹಾರ್ಮುಜ್ ತೆರೆಯಿರಿ. ಇಲ್ಲದಿದ್ದರೆ ನರಕದ ಅನುಭವ ಎದುರಾಗಲಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದನ್ನರಿತು, ದಕ್ಷಿಣ ಇರಾನ್ನ ಬುಷೆಹರ್ ಪರಮಾಣು ಸ್ಥಾವರದ ಸಮೀಪ ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕ್ಷಿಪಣಿ ಸಮೀಪದ ಪ್ರದೇಶಕ್ಕೆ ಅಪ್ಪಳಿಸಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾನೆ. ಸ್ಥಾವರಕ್ಕೆ ನೇರ ಹಾನಿ ಆಗದಿದ್ದರೂ ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯಾಗಿದೆ.
ಖುಜೆಸ್ತಾನ್ ಪ್ರಾಂತ್ಯದಲ್ಲಿನ ಪೆಟ್ರೊಕೆಮಿಕಲ್ ಘಟಕಗಳ ಮೇಲೆಯೂ ವೈಮಾನಿಕ ದಾಳಿ ನಡೆದಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಮಹಶಹರ್ ವಿಶೇಷ ಪೆಟ್ರೊಕೆಮಿಕಲ್ ವಲಯದಲ್ಲಿನ ಮೂರು ಸಂಸ್ಥೆಗಳ ಮೇಲೆ ದಾಳಿ ನಡೆದಿದ್ದು ಸ್ಫೋಟಗಳು ಸಂಭವಿಸಿವೆ.
ಈ ದಾಳಿಗಳನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಾತನಾಡಿ, “ಬುಷೆಹರ್ ಪರಮಾಣು ಸ್ಥಾವರದ ಮೇಲೆ ನಡೆದ ದಾಳಿಗಳು ಇರಾನ್ ಮಾತ್ರವಲ್ಲದೆ ಸಂಪೂರ್ಣ ಗಲ್ಫ್ ಪ್ರದೇಶಕ್ಕೆ ಅಪಾಯಕಾರಿಯಾಗಿದೆ” ಎಂದು ಹೇಳಿದ್ದಾರೆ. ಸ್ಥಾವರದ ಮೇಲೆ ನಾಲ್ಕು ಬಾರಿ ದಾಳಿ ನಡೆದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಫೆಬ್ರವರಿ 28ರಿಂದ ಆರಂಭವಾದ ಸಂಘರ್ಷದ ಬಳಿಕ ಅಮೆರಿಕ-ಇಸ್ರೇಲ್ ಇರಾನ್ನಾದ್ಯಂತ 30ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಮೇಲೆ ದಾಳಿ ನಡೆಸಿದೆಯೆಂದು ಇರಾನ್ ಆರೋಪಿಸಿದೆ. ಪರಮಾಣು ಮತ್ತು ಶಸ್ತ್ರಾಸ್ತ್ರ ಸಂಶೋಧನೆಗೆ ಸಂಬಂಧಿಸಿದ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ. ಇದರ ಪರಿಣಾಮವಾಗಿ ಇರಾನ್ನಲ್ಲಿ ವಿಶ್ವವಿದ್ಯಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಆನ್ಲೈನ್ ತರಗತಿಗಳಿಗೆ ಬದಲಾವಣೆ ಮಾಡಲಾಗಿದೆ.
ಶಾಂತಿ ಮಾತುಕತೆ ಕುರಿತು, ಇರಾನ್ ಮಧ್ಯಸ್ಥಿಕೆ ಮಾತುಕತೆಗಾಗಿ ಇಸ್ಲಾಮಾಬಾದ್ಗೆ ತೆರಳಲು ನಾವು ಯಾವತ್ತೂ ನಿರಾಕರಿಸಿಲ್ಲ ಎಂದು ಹೇಳಿದೆ. ಇನ್ನೊಂದೆಡೆ, ಪಾಕಿಸ್ತಾನವು ಅಮೆರಿಕ-ಇರಾನ್ ಮಧ್ಯಸ್ಥಿಕೆ ವಿಫಲವಾಗಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದೆ. ಸಂಘರ್ಷದ ನಡುವೆಯೂ, ಮಾನವೀಯ ದೃಷ್ಟಿಯಿಂದ ಅಗತ್ಯ ಸರಕು ಸಾಗಣೆ ಹಡಗುಗಳಿಗೆ ಹೊರ್ಮಜ್ ಜಲಸಂಧಿ ಮೂಲಕ ಸಂಚಾರಕ್ಕೆ ಇರಾನ್ ಅನುಮತಿ ನೀಡಿದೆ. ಇನ್ನೊಂದೆಡೆ, ಇಸ್ಫಹಾನ್ ಪ್ರಾಂತ್ಯದಲ್ಲಿ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಒಟ್ಟಾರೆ, ಮುಂದಿನ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಸಂಘರ್ಷ ಇನ್ನಷ್ಟು ಭೀಕರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.