ಟೆಹ್ರಾನ್, ಏ. 05 (DaijiworldNews/TA): ಅಮೇರಿಕಾ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇತ್ತೀಚೆಗೆ ಇರಾನ್ನಲ್ಲಿ ನಾಪತ್ತೆಯಾಗಿದ್ದ ಅಮೇರಿಕಾ ಪೈಲಟ್ನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಕಾರ್ಯಾಚರಣೆಯನ್ನು ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ಧೈರ್ಯಶಾಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದೆಂದು ವರ್ಣಿಸಿದ್ದಾರೆ.
ಅಮೇರಿಕಾದ F-15E Strike Eagle ಯುದ್ಧ ವಿಮಾನವು ಅಪಘಾತಕ್ಕೀಡಾದ ಬಳಿಕ, ಅದರಲ್ಲಿದ್ದ ಇಬ್ಬರಲ್ಲಿ ಒಬ್ಬರನ್ನು ತಕ್ಷಣವೇ ರಕ್ಷಿಸಲಾಗಿತ್ತು. ಮತ್ತೊಬ್ಬ ಪೈಲಟ್ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದು, ಭಾರೀ ಹುಡುಕಾಟ ಮತ್ತು ಸೈನಿಕ ಕಾರ್ಯಾಚರಣೆಯ ಬಳಿಕ ಅವರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅಮೇರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ನ ಪರ್ವತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಪೈಲಟ್ನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಯಾವುದೇ ಅಮೇರಿಕಾ ಸೈನಿಕರು ಸಾವನ್ನಪ್ಪಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ವೇಳೆ ಇಸ್ರೇಲಿ ಪಡೆಗಳು ಸಹ ಸಹಕಾರ ನೀಡಿದ್ದವು ಎಂಬ ಮಾಹಿತಿ ಹೊರಬಂದಿದೆ.
ಇನ್ನೊಂದೆಡೆ, ಇರಾನ್ ಅಮೆರಿಕ ಹಾಗೂ ಇಸ್ರೇಲ್ಗೆ ಸೇರಿದ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರೆಸಿದೆ ಎಂದು ವರದಿಯಾಗಿದೆ. ಬುಶೆಹ್ರ್ ಪರಮಾಣು ಸೌಲಭ್ಯ ಸಮೀಪ ನಡೆದ ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.
ಇರಾನ್ ಮಾಧ್ಯಮಗಳ ಪ್ರಕಾರ, ಮಧ್ಯ ಇರಾನ್ನ ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದಲ್ಲಿ ಮತ್ತೊಂದು F-15E Strike Eagle ಪತನಗೊಂಡಿರಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಅಮೇರಿಕಾ ಪೈಲಟ್ಗಾಗಿ ಇರಾನ್ ಸೇನೆಯು ಬೃಹತ್ ಶೋಧ ಕಾರ್ಯಾಚರಣೆ ನಡೆಸಿ, ಮಾಹಿತಿ ನೀಡುವವರಿಗೆ 60,000 ಡಾಲರ್ ಬಹುಮಾನ ಘೋಷಿಸಿತ್ತು.
ನೈಋತ್ಯ ಇರಾನ್ನಲ್ಲಿ ಸ್ಥಳೀಯರು ಖಾಸಗಿ ವಾಹನಗಳಲ್ಲಿ ಘಟನಾ ಸ್ಥಳದ ಸುತ್ತಮುತ್ತ ಸಂಚರಿಸಿ ಪೈಲಟ್ನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರೆಂಬ ವರದಿಗಳು ಕೂಡ ಬಂದಿವೆ. ಆದರೆ ಪೈಲಟ್ ಜೊತೆ ಯಾವುದೇ ರೀತಿಯ ದುರ್ವರ್ತನೆ ಮಾಡಬಾರದು ಎಂದು ಇರಾನ್ ಸಶಸ್ತ್ರ ಪಡೆಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದವು.
ಇದೇ ವೇಳೆ, ಫೆಬ್ರವರಿ 28ರಿಂದ ಆರಂಭವಾದ ಸಂಘರ್ಷದ ಬಳಿಕ ಇರಾನ್ ಮೂರನೇ ಬಾರಿ F-35 Lightning II ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದೆ. ಆದರೆ ಈ ಆರೋಪಗಳನ್ನು ಅಮೇರಿಕಾದ ಸೆಂಟ್ರಲ್ ಕಮಾಂಡ್ ತಳ್ಳಿ ಹಾಕಿದ್ದು, ತಮ್ಮ ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ. ಒಟ್ಟಾರೆ, ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚುವಂತೆ ಮಾಡಿವೆ.