ಕೇಪ್ ಕ್ಯಾನವೆರಲ್, ಏ. 04 (DaijiworldNews/TA): 50 ವರ್ಷಗಳ ನಂತರ ಮನುಜ ಮತ್ತೆ ಚಂದ್ರನತ್ತ ಹೊರಟ ಮಹತ್ವಾಕಾಂಕ್ಷಿ ಯಾನವು ಗುರುವಾರ ಭಾರತೀಯ ಕಾಲಮಾನ ಅನ್ವಯ ಮುಂಜಾನೆ 4.05ಕ್ಕೆ ಯಶಸ್ವಿಯಾಗಿ ಆರಂಭವಾಯಿತು. ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕ್ಯಾಪ್ಸ್ಯೂಲ್ SLS 33 ಅಡಿಯ ರಾಕೆಟ್ನಲ್ಲಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತು. ಈ ಮಿಷನ್ 2023 ರಲ್ಲಿ ಆರಂಭವಾಗಬೇಕಾಗಿದ್ದರೂ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈಗ 10 ದಿನಗಳ ಈ ಪ್ರಯಾಣವು ಸಾಕಾರವಾಗಿದೆ.

ಉಡಾವಣೆಯ 5 ನಿಮಿಷದೊಳಗೆ, ಕಮಾಂಡರ್ ರೀಡ್ ವೈಸ್ಮನ್ ತನ್ನ ಸಂದೇಶದಲ್ಲಿ “ನಾವು ಸುಂದರ ಚಂದ್ರೋದಯವನ್ನು ಕಾಣುತ್ತಿದ್ದೇವೆ. ಅದರತ್ತಲೇ ಹೊರಟಿದ್ದೇವೆ” ಎಂದು ಸಂತಸದ ಸುದ್ದಿಯನ್ನು ಹಂಚಿಕೊಂಡರು. ಅವರೊಂದಿಗೆ ಪೈಲಟ್ ವಿಕ್ಟರ್ ಗ್ಲೋವರ್, ಚಂದ್ರನತ್ತ ಹೊರಟ ಪ್ರಥಮ ಕಪ್ಪುವರ್ಣೀಯ, ಕ್ರಿಸ್ಟಿನಾ ಕೋಚ್, ಚಂದ್ರನತ್ತ ಹೊರಟ ಮೊದಲ ಮಹಿಳೆ, ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಇದ್ದರು. ರಾಕೆಟ್ಗೆ 26 ಲಕ್ಷ ಲೀಟರ್ ಹೈಡ್ರೋಜನ್ ಇಂಧನವನ್ನು ತುಂಬಲಾಗಿದೆ, ಇದು ಉಡಾವಣೆಗೆ ಅಗತ್ಯ ಶಕ್ತಿ ನೀಡಿತು.
ಪ್ರಥಮ ಹಂತದಲ್ಲಿ, ಓರಿಯನ್ ಕ್ಯಾಪ್ಸ್ಯೂಲ್ ಭೂಕಕ್ಷೆಯಲ್ಲಿ ಉಳಿಯುತ್ತಾ ವಿವಿಧ ತಂತ್ರಜ್ಞಾನ ಮತ್ತು ಜೀವಾಧಾರ ಪರಿಶೀಲನೆಗಳನ್ನು ನಡೆಸಲಿದೆ. ಯಾನಿಗಳು ರಾಕೆಟ್ನಿಂದ ಕ್ಯಾಪ್ಸ್ಯೂಲ್ ಬೇರ್ಪಡಿಸುವ ಅಭ್ಯಾಸ ಮಾಡುವಾಗ ಅರ್ಧ ಗಂಟೆಗೆ ನಾಸಾ ಕಂಟ್ರೋಲ್ ಜೊತೆ ಸಂಪರ್ಕ ಕಡಿತವಾಗುತ್ತದೆ. ಈ ಎಲ್ಲ ಪರಿಶೀಲನೆಗಳು ಯಶಸ್ವಿಯಾಗಿ ಮುಗಿದ ಬಳಿಕ, ಚಂದ್ರನತ್ತ ನೇರ ಪ್ರಯಾಣ ಆರಂಭವಾಗುತ್ತದೆ. ಯಾನಿಗಳು ಸುಮಾರು 4,000 ಮೈಲಿಗಳ ಎತ್ತರ ತಲುಪುವ ನಿರೀಕ್ಷೆ ಇದೆ, ಇದು ಮಾನವರು ಈಗುವರೆಗೂ ತಲುಪದ ಎತ್ತರವಾಗಿದೆ. ಅಲ್ಲಿಂದ ಚಂದ್ರನ ಕುಳಿಗಳ ಫೋಟೋಗಳನ್ನು ಸೆರೆಹಿಡಿಯುವುದು ಸೇರಿದಂತೆ ಹಲವಾರು ವಿಜ್ಞಾನ ಪರಿಕ್ಷಣೆಗಳು ನಡೆಸಲಿವೆ.
ಮೂದಲ ಪ್ರಯಾಣದ ಯಶಸ್ಸಿನ ಬಳಿಕ, ಆರ್ಟಿಮಿಸ್ 3 ರಲ್ಲಿ ಮತ್ತೆ ಇದೇ ರಾಕೆಟ್ನಲ್ಲಿ ಯಾನಿಗಳು ನಭಕ್ಕೆ ಜಿಗಿಯಲಿದ್ದಾರೆ. ಈ ವೇಳೆ ಸ್ಪೇಸ್ಎಕ್ಸ್ ಸ್ಟಾರ್ಶಿಪ್ ಮತ್ತು ಬ್ಲೂ ಒರಿಜಿನ್ ಬ್ಲೂಮೂನ್ ಲ್ಯಾಂಡರ್ಗಳೊಂದಿಗೆ ಡಾಕಿಂಗ್ ಪರೀಕ್ಷೆ ನಡೆಸಲಾಗುವುದು. ಇದು ಚಂದ್ರನ ಮೇಲಿಳಿಯುವ ಆರ್ಟಿಮಿಸ್ 4 ಯಾನಿಗೆ ಪೂರ್ವಸಿದ್ಧತೆ ಒದಗಿಸುತ್ತದೆ. ಆರ್ಟಿಮಿಸ್ 4 ಯಾನದಲ್ಲಿ ಯಾನಿಗಳು ನೇರವಾಗಿ ಚಂದ್ರನ ಅಂಗಳಕ್ಕೇ ಕಾಲಿಡಲಿದ್ದಾರೆ. ಅಲ್ಲಿಂದ ಭವಿಷ್ಯದಲ್ಲಿ ಮಂಗಳನತ್ತ ಪ್ರಯಾಣ ಮಾಡಲು ಬಳಸುವ ಲಾಂಚ್ ಪ್ಯಾಡ್ ನಿರ್ಮಿಸಲು ಯೋಜಿಸಲಾಗಿದೆ.
ಚಂದ್ರನತ್ತ ಹೊರಟಿರುವ ಯಾನಿಗಳಿಗೆ ಐಫೋನ್ಗಳು ನೀಡಲಾಗಿದ್ದು, ಏರೋಪ್ಲೇನ್ ಮೋಡ್ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಬಳಸಲಿದ್ದಾರೆ. ಈ ಮಿಷನ್ 50 ವರ್ಷಗಳ ಬಳಿಕ ಮಾನವರು ಚಂದ್ರನತ್ತ ಹತ್ತಿದ ಐತಿಹಾಸಿಕ ಪ್ರಯಾಣವಾಗಿ ದಾಖಲಾತಿಯಾಗಿದೆ. ಮಾನವ ಇತಿಹಾಸದಲ್ಲಿ ಈ ಯಾನವು ವಿಜ್ಞಾನ, ತಂತ್ರಜ್ಞಾನ ಮತ್ತು ಭವಿಷ್ಯದ ಬಾಹ್ಯಾಕಾಶ ಅಧ್ಯಯನದ ದೃಷ್ಟಿಯಿಂದ ಅಮಿತ ಸಾಧನೆ ಎಂದು ಪರಿಗಣಿಸಲಾಗುತ್ತಿದೆ.