ಮಾಸ್ಕೋ, ಏ. 03 (DaijiworldNews/TA): ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಇನ್ನೂ ಸಂಪೂರ್ಣವಾಗಿ ಬಗೆಹರಿಯದ ಹಿನ್ನೆಲೆ ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಿದೆ. ಈಗಾಗಲೇ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಭಾರತ ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ.

ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಇಂಧನ ಬಿಕ್ಕಟ್ಟು ಗಂಭೀರವಾಗುತ್ತಿರುವ ಸಂದರ್ಭದಲ್ಲಿ, ಭಾರತಕ್ಕೆ ಅಗತ್ಯವಿರುವ ತೈಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಸಿದ್ಧವಿದೆ ಎಂದು ತಿಳಿಸಿದೆ. ಉತ್ಪಾದನೆಯನ್ನು ಹೆಚ್ಚಿಸಿ ನಿರಂತರ ಪೂರೈಕೆ ನೀಡಲು ತಾವು ಸಿದ್ಧವಿದ್ದೇವೆ ಎಂಬ ಭರವಸೆಯನ್ನು ಮಾಸ್ಕೋ ನೀಡಿದೆ.
ಭಾರತಕ್ಕೆ ಅಧಿಕೃತ ಭೇಟಿ ನೀಡಿದ ರಷ್ಯಾದ ಉಪಪ್ರಧಾನಿ ಡೆನಿಸ್ ಮಾಂಟುರೊವ್ ಅವರು, ಭಾರತದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಷ್ಯಾದ ಇಂಧನ ಕಂಪನಿಗಳು ಸಾಮರ್ಥ್ಯ ಹೊಂದಿವೆ ಎಂದು ಹೇಳಿದ್ದಾರೆ. ತೈಲ ಮತ್ತು ಎಲ್ಎನ್ಜಿ ರಫ್ತುಗಳನ್ನು ಹಂತ ಹಂತವಾಗಿ ಹೆಚ್ಚಿಸುವ ಯೋಜನೆಯೂ ಇದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿ ನೀಡಿದ ಮಾಹಿತಿಯ ಪ್ರಕಾರ, 2025ರ ಅಂತ್ಯದ ವೇಳೆಗೆ ಭಾರತಕ್ಕೆ ಖನಿಜ ರಸಗೊಬ್ಬರಗಳ ಪೂರೈಕೆಯನ್ನು ಶೇ.40ರಷ್ಟು ಹೆಚ್ಚಿಸಲಾಗಿದೆ. ಭವಿಷ್ಯದಲ್ಲೂ ಭಾರತದ ಅವಶ್ಯಕತೆಗಳನ್ನು ಪೂರೈಸಲು ರಷ್ಯಾ ಬದ್ಧವಾಗಿದೆ ಎಂದು ಮಂಟುರೊವ್ ತಿಳಿಸಿದ್ದಾರೆ.
ರಷ್ಯಾದ ತೈಲ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ತೈಲ ಮತ್ತು ಎಲ್ಎನ್ಜಿ ಸರಬರಾಜನ್ನು ಸ್ಥಿರವಾಗಿ ಮುಂದುವರಿಸಲು ಉತ್ಪಾದನೆ ಹೆಚ್ಚಿಸಲು ಸಿದ್ಧವಾಗಿವೆ. ಜೊತೆಗೆ, ಉಭಯ ರಾಷ್ಟ್ರಗಳು ಪರಮಾಣು ಶಕ್ತಿ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸಲು ಮುಂದಾಗಿದ್ದು, ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಅಭಿವೃದ್ಧಿ ಯೋಜನೆಗಳನ್ನು ಸಮಯಕ್ಕೆ ಅನುಗುಣವಾಗಿ ಕಾರ್ಯಗತಗೊಳಿಸಲು ಒಪ್ಪಿಕೊಂಡಿವೆ.
ಯೂರಿಯಾ ಉತ್ಪಾದನೆಗಾಗಿ ಜಂಟಿ ಯೋಜನೆಯೂ ಅಭಿವೃದ್ಧಿ ಹಂತದಲ್ಲಿದ್ದು, ಇದು ಎರಡೂ ರಾಷ್ಟ್ರಗಳ ಕೃಷಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ವರದಿಗಳ ಪ್ರಕಾರ, ಫೆಬ್ರವರಿಗಿಂತ ಮಾರ್ಚ್ ತಿಂಗಳಲ್ಲಿ ತೈಲ ಆಮದು ಶೇ.90ರಷ್ಟು ಹೆಚ್ಚಳ ಕಂಡಿದೆ.