ಇಂಡೋನೇಷ್ಯಾ, ಏ. 02 (DaijiworldNews/AA): ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಭೂಕಂಪದ ಕೇಂದ್ರಬಿಂದು ಟೆರ್ನೇಟ್ ನಗರದಿಂದ ಸುಮಾರು 127 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಭೂಮಿಯ ಆಳದಿಂದ ಸುಮಾರು 35 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ. ಬಲವಾದ ಕಂಪನಗಳ ನಂತರ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಮಾಹಿತಿ ನೀಡಿದೆ.
ಭೂಕಂಪದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ಸೇರಿದಂತೆ ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿ ತೀರಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದ್ದು, ಸಮುದ್ರದ ಅಲೆಗಳು ಸುಮಾರು 0.3 ರಿಂದ 1 ಮೀಟರ್ ಎತ್ತರದವರೆಗೆ ಏಳುವ ಸಾಧ್ಯತೆಯಿದೆ ಎಂದು ಅಮೆರಿಕದ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿತ್ತು.
ಭೂಕಂಪದ ತೀವ್ರತೆಗೆ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಗೂ ಹಲವು ಕಡೆಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.