ಟೆಹ್ರಾನ್, ಮಾ. 31(DaijiworldNews/TA): ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ, ಅಮೇರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ವಿಮಾನವೊಂದು ಹಾನಿಗೊಳಗಾದ ಘಟನೆ ಬೆಳಕಿಗೆ ಬಂದಿದೆ. ಈ ವಿಮಾನ ದೆಹಲಿಗೆ ಹಾರಾಟ ನಡೆಸಬೇಕಿತ್ತು ಎನ್ನಲಾಗಿದೆ.

ಇರಾನ್ನ ಮಶಾದ್ ವಿಮಾನ ನಿಲ್ದಾಣದಲ್ಲಿ ಮಹಾನ್ ಏರ್ಗೆ ಸೇರಿದ ವಿಮಾನ ಅಮೆರಿಕದ ದಾಳಿಯಿಂದ ಹಾನಿಗೊಳಗಾಗಿದೆ ಎಂದು ವರದಿಗಳು ತಿಳಿಸಿವೆ. ಈ ವಿಮಾನವು ಪರಿಹಾರ ಸಾಮಗ್ರಿಗಳನ್ನು ತರಲು ನವದೆಹಲಿಗೆ ತೆರಳಲು ಸಿದ್ಧವಾಗಿದ್ದು, ಏಪ್ರಿಲ್ 1ರ ಬೆಳಗ್ಗೆ 4 ಗಂಟೆಗೆ ದೆಹಲಿಗೆ ಆಗಮಿಸಬೇಕಿತ್ತು ಎಂದು ತಿಳಿದುಬಂದಿದೆ.
ಈ ಘಟನೆ ನಾಗರಿಕ ವಿಮಾನಯಾನ ಸುರಕ್ಷತೆ ಕುರಿತಂತೆ ಗಂಭೀರ ಚಿಂತೆಗಳನ್ನು ಹುಟ್ಟುಹಾಕಿದೆ. ಮಹಾನ್ ಏರ್ ಇರಾನ್ನ ಖಾಸಗಿ ವಿಮಾನಯಾನ ಸಂಸ್ಥೆಯಾಗಿದ್ದು, ಪಶ್ಚಿಮ ಏಷ್ಯಾ ಸೇರಿದಂತೆ ಹಲವು ಪ್ರದೇಶಗಳಿಗೆ ಸೇವೆಗಳನ್ನು ನೀಡುತ್ತದೆ.
ಇದೇ ಸಂದರ್ಭದಲ್ಲಿ, ಯುದ್ಧದ ಆರಂಭದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 16-17 ಪ್ರಯಾಣಿಕ ಹಾಗೂ ಸರಕು ವಿಮಾನಗಳು ನಾಶವಾಗಿದ್ದವು ಎಂದು ವರದಿಯಾಗಿದೆ. ಈ ವಿಮಾನಗಳು ಇರಾನ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಗೆ ಸೇರಿದವು ಎಂದು ಇಸ್ರೇಲ್ ಆರೋಪಿಸಿದೆ.
ಇದಲ್ಲದೆ, ಉಕ್ರೇನ್ ಯುದ್ಧದ ಹಿನ್ನೆಲೆ ರಷ್ಯಾಕ್ಕೆ ಶಸ್ತ್ರಾಸ್ತ್ರ ಸಾಗಿಸಲು ಇರಾನ್ ಏರ್ ಮತ್ತು ಮಹಾನ್ ಏರ್ನಂತಹ ವಾಣಿಜ್ಯ ವಿಮಾನಗಳನ್ನು ಬಳಸಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ. ಇದಕ್ಕೂ ಮೊದಲು ನಡೆದ ಸಾಗಣೆಗಳಲ್ಲಿಯೂ ಭಾರತೀಯ ವಿಮಾನಗಳನ್ನು ಬಳಸಿರಲಿಲ್ಲ. ಇದೀಗ ದೆಹಲಿಗೆ ತೆರಳಿ, 11 ಟನ್ಗಳಷ್ಟು ಔಷಧಿಗಳನ್ನೊಳಗೊಂಡ ಮಾನವೀಯ ನೆರವನ್ನು ಹೊತ್ತುಕೊಂಡು ಮರಳಬೇಕಿದ್ದ ವಿಮಾನ ದಾಳಿಗೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ.