ಟೆಲ್ ಅವೀವ್, ಮಾ. 16 (DaijiworldNews/AA): ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್ ಡಾಲರ್ ಅಂದರೆ ಸುಮಾರು 7,656 ಕೋಟಿ ರೂ. ಮೊತ್ತದ ತುರ್ತು ಬಜೆಟ್ ಹಂಚಿಕೆಗೆ ಅನುಮೋದನೆ ನೀಡಿದೆ.

ಕ್ಯಾಬಿನೆಟ್ ಮಂತ್ರಿಗಳ ಸಭೆಯಲ್ಲಿ ಸುಮಾರು 2.6 ಶತಕೋಟಿ ಶೇಕೆಲ್ ಮೌಲ್ಯದ ಈ ಪ್ಯಾಕೇಜ್ಗೆ ಒಪ್ಪಿಗೆ ನೀಡಲಾಗಿದೆ. ಈ ನಿಧಿಯನ್ನು ಭದ್ರತಾ ಖರೀದಿಗಳು ಹಾಗೂ ತುರ್ತು ಅಗತ್ಯಗಳು ಪೂರೈಸಲು ಬಳಸಲಾಗುವುದು. ಈ ಹೆಚ್ಚುವರಿ ಬಜೆಟ್ ನೊಂದಿಗೆ ಅಖಾಡಕ್ಕೆ ಇಳಿದಿರುವ ಇಸ್ರೇಲ್ ಇರಾನ್ನಲ್ಲಿ ಕನಿಷ್ಟ ಮೂರು ವಾರಗಳ ಕಾರ್ಯಾಚರಣೆಗೆ ಯೋಜನೆಗಳನ್ನು ಹೊಂದಿದೆ ಎಂದು ವರದಿಯಾಗಿದೆ.
"ಈ ಅವಧಿಯಲ್ಲಿ ಸಾವಿರಾರು ಗುರಿಗಳನ್ನು ಹೊಡೆಯಬಹುದು, ಅಮೆರಿಕದ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಇಸ್ರೇಲ್ ಸಿದ್ಧವಾಗಿದೆ" ಎಂದು ಐಡಿಎಫ್ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ತಿಳಿಸಿದ್ದಾರೆ.