ಜೆರುಸಲೇಂ, ಮಾ. 15 (DaijiworldNews/TA): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕ್ಷೇಮವಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.

ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ ನಡೆಯುತ್ತಿರುವ ಅಮೆರಿಕ–ಇಸ್ರೇಲ್–ಇರಾನ್ ಉದ್ವಿಗ್ನತೆಯ ಕುರಿತು ನಡೆದ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಹಂಚಿಕೊಂಡಿದ್ದರು. ಆದರೆ ಆ ವಿಡಿಯೋದಲ್ಲಿ ಅವರ ಬಲಗೈಯಲ್ಲಿ ಆರು ಬೆರಳುಗಳಿರುವಂತೆ ಕಾಣುತ್ತಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಇದರಿಂದ ವಿಡಿಯೋ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ ಎಂಬ ವದಂತಿಗಳು ಹರಡಿವೆ.
ವಿಡಿಯೋದಲ್ಲಿ ನೆತನ್ಯಾಹು ಕೈ ಎತ್ತಿದಾಗ ಕಿರುಬೆರಳಿನ ಪಕ್ಕದಲ್ಲಿ ಮತ್ತೊಂದು ಬೆರಳು ಕಾಣಿಸುತ್ತಿದೆ ಎಂದು ಕೆಲವರು ಗಮನಿಸಿದ್ದರು. ಇದನ್ನು ಅನೇಕರು “ಕ್ಲಾಸಿಕ್ AI ಫಿಂಗರ್ ಎರರ್” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಗ್ರೋಕ್ ಎಂಬ ಎಐ ಚಾಟ್ಬಾಟ್ ಕೂಡ ಸ್ಪಷ್ಟನೆ ನೀಡಿದ್ದು, “ಬೆಂಜಮಿನ್ ನೆತನ್ಯಾಹುಅವರಿಗೆ ಆರು ಬೆರಳುಗಳಿಲ್ಲ” ಎಂದು ತಿಳಿಸಿದೆ. ಇಸ್ರೇಲ್ ಸರ್ಕಾರದ ಅಧಿಕೃತ ದೃಶ್ಯಗಳಲ್ಲಿ ಅವರ ಕೈಯಲ್ಲಿ ಐದು ಬೆರಳುಗಳು ಮಾತ್ರ ಇರುವುದನ್ನು ದೃಢಪಡಿಸಲಾಗಿದೆ.