ವಾಷಿಂಗ್ಟನ್, ಮಾ. 14 (DaijiworldNews/AA): ಇರಾನ್ ಕಚ್ಚಾ ತೈಲ ವ್ಯವಹಾರದ ಹೃದಯ ಖಾರ್ಗ್ ದ್ವೀಪದ ಮೇಲೆಯೇ ಅಮೆರಿಕ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ಬಗ್ಗೆ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿ ಇರಾನ್ನ ಕಿರೀಟ ರತ್ನವಾದ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶಮಾಡಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ಉತ್ತರ ಪರ್ಷಿಯನ್ ಕೊಲ್ಲಿಯಲ್ಲಿರುವ ಖಾರ್ಗ್ ದ್ವೀಪವು ಇರಾನ್ನ ಕಚ್ಚಾ ರಫ್ತಿನ ಸುಮಾರು 90% ಅನ್ನು ನಿರ್ವಹಿಸುತ್ತದೆ. ಎರಡನೇ ಶುಕ್ರವಾರದವರೆಗೆ ಯುದ್ಧ ಮುಂದುವರೆದರೂ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ತೈಲ ಸಾಗಣೆ ಮೂಲಸೌಕರ್ಯ ಮತ್ತು ಸಂಗ್ರಹಣೆ ಕೇಂದ್ರ ಹೊಂದಿರುವ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಲು ಹೋಗಿರಲಿಲ್ಲ" ಎಂದರು.
"ಇನ್ನೊಂದು ಕಡೆ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಕಚ್ಚಾ ತೈಲ ಸಂಸ್ಕರಣಾ ಕೇಂದ್ರ, ಗ್ಯಾಸ್ ಕೇಂದ್ರಗಳ ಮೇಲೆ ದಾಳಿ ಮಾಡುವುದರ ಜೊತೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು ಅಮೆರಿಕವನ್ನು ಕೆರಳಿಸಿತ್ತು. ಈಗ ಅಮೆರಿಕವೂ ಇರಾನಿನ ಆರ್ಥಿಕ ಶಕ್ತಿಯಾಗಿದ್ದ ಖಾರ್ಗ್ ದ್ವೀಪದ ಮೇಲೆಯೇ ದಾಳಿ ನಡೆಸಿದೆ" ಎಂದು ಮಾಹಿತಿ ನೀಡಿದರು.
"ಜಗತ್ತು ಹಿಂದೆಂದೂ ನೋಡಿರದ ವೇಗದಲ್ಲಿ ಇರಾನಿನ ಮಿಲಿಟರಿಯನ್ನು ಸೋಲಿಸುತ್ತೇವೆ. ಇರಾನಿನ ಎಲ್ಲ ಶಕ್ತಿಯನ್ನು ನಾಶಮಾಡಲು, ನಿಷ್ಕ್ರಿಯಗೊಳಿಸುವ ಯೋಜನೆ ಪ್ರಗತಿಯಲ್ಲಿದೆ" ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರತಿಕ್ರಿಯಿಸಿದ್ದಾರೆ.