ವಾಷಿಂಗ್ಟನ್, ಮಾ. 13 (DaijiworldNews/AK): ತೈಲ ಬೆಲೆ ಏರಿಕೆಯಾದರೆ ಅಮೆರಿಕ ಬಹಳಷ್ಟು ಲಾಭಗಳಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, ಅಮೆರಿಕ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ತೈಲ ಬೆಲೆಗಳು ಏರಿದಾಗ ನಾವು ಬಹಳಷ್ಟು ಹಣವನ್ನು ಗಳಿಸುತ್ತೇವೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ನನ್ನ ಮೊದಲ ಆದ್ಯತೆ ಎಂದು ಬರೆದಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಮಧ್ಯಪ್ರಾಚ್ಯ ಮತ್ತು ವಾಸ್ತವವಾಗಿ ಜಗತ್ತನ್ನು ನಾಶಪಡಿಸಲು ಹೊರಟಿರುವ ಇರಾನ್ನನ್ನು ತಡೆಯತ್ತೇನೆ. ಎಂದಿಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದಿದ್ದಾರೆ.
ತನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಸಾರಿದ್ದಕ್ಕೆ ಇರಾನ್ ಈಗ ಪಶ್ಚಿಮ ಏಷ್ಯಾದ ನಡುವಿನ ಪ್ರಮುಖ ವ್ಯಾಪಾರ ಕೊಂಡಿಯಾದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ.
ಸಾಮಾನ್ಯವಾಗಿ ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲವು(Crude Oi) ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತಿತ್ತು. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮವು ಕಚ್ಚಾ ತೈಲ ಬೆಲೆ ಮತ್ತೆ ಏರಿಕೆ ಕಂಡಿದೆ. ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 100 ಡಾಲರ್ ಗಡಿಯನ್ನು ದಾಟಿದೆ.
ಮಧ್ಯಪ್ರಾಚ್ಯ ದೇಶಗಳು ಕಚ್ಚಾ ತೈಲ ವ್ಯವಹಾರವನ್ನು ಡಾಲರ್ನಲ್ಲೇ ನಡೆಸುತ್ತಿವೆ. ಈಗ ವಿಶ್ವದ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನಿಜುವೆಲಾದ ತೈಲದ ನಿಯಂತ್ರಣವೂ ಅಮೆರಿಕದ ಕೈಯಲ್ಲಿದೆ. ತೈಲ ಬೆಲೆ ಏರಿಕೆಯಾದರೆ ಡಾಲರ್ ಬಲಗೊಳ್ಳುತ್ತದೆ. ಬೇರೆ ದೇಶಗಳ ಕರೆನ್ಸಿ ಕುಸಿದರೂ ಡಾಲರ್ ಮೌಲ್ಯ ಏರಿಕೆಯಾಗುತ್ತಲೇ ಇರುತ್ತದೆ. ಬೇರೆ ದೇಶಗಳ ಷೇರು ಮಾರುಕಟ್ಟೆ ಕುಸಿತಗೊಂಡರೂ ಡಾಲರ್ ಮೌಲ್ಯ ಏರಿಕೆಯಾಗುತ್ತಿರುವ ಕಾರಣ ಹೂಡಿಕೆದಾರರು ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ.