ವಾಷಿಂಗ್ಟನ್, ಮಾ. 11 (DaijiworldNews/TA): ತನ್ನ ಮೇಲೆ ದಾಳಿ ನಡೆದಿರುವ ಹಿನ್ನೆಲೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರದ ಒಳಭಾಗದಲ್ಲಿ ನೇವಲ್ ಮೈನ್ಸ್ಗಳನ್ನು ಅಳವಡಿಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಈ ಸ್ಫೋಟಕಗಳ ಉದ್ದೇಶ ಹಡಗುಗಳ ಸಂಚಾರವನ್ನು ಅಡ್ಡಿಪಡಿಸುವುದು ಎನ್ನಲಾಗಿದೆ.

ಈ ಕುರಿತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಯಾವುದೇ ನೇವಲ್ ಮೈನ್ಸ್ ಹಾಕಿದ್ದರೆ ತಕ್ಷಣವೇ ಅವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಹಿಂದೆಂದೂ ಕಾಣದ ರೀತಿಯಲ್ಲಿ ಮಿಲಿಟರಿ ದಾಳಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಅಮೇರಿಕಾದ ಮಾಹಿತಿ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ನೇವಲ್ ಮೈನ್ಸ್ ಅಳವಡಿಸಲು ಪ್ರಯತ್ನಿಸುತ್ತಿದ್ದ ಇರಾನ್ನ ಸುಮಾರು 16 ಹಡಗುಗಳನ್ನು ಅಮೇರಿಕಾದ ಪಡೆಗಳು ನಾಶ ಮಾಡಿವೆ ಎಂದು ಹೇಳಲಾಗಿದೆ.
ನೇವಲ್ ಮೈನ್ಸ್ ಎಂದರೇನು? : ಭೂಮಿಯೊಳಗೆ ಉಗ್ರಗಾಮಿಗಳು ಅಥವಾ ನಕ್ಸಲೈಟ್ಗಳು ನೆಲಬಾಂಬ್ಗಳನ್ನು ಹೂತು ಇಡುವ ಬಗ್ಗೆ ನಾವು ಕೇಳಿದ್ದೇವೆ. ಆ ಬಾಂಬ್ಗಳು ಒತ್ತಡಕ್ಕೆ ಒಳಗಾದಾಗ ಸ್ಫೋಟಗೊಳ್ಳುತ್ತವೆ. ಇದೇ ರೀತಿಯ ತಂತ್ರವನ್ನು ಸಮುದ್ರದಲ್ಲಿಯೂ ಬಳಸಲಾಗುತ್ತದೆ. ನೀರಿನ ಒಳಭಾಗದಲ್ಲಿ ಇರಿಸುವ ಸ್ಫೋಟಕಗಳನ್ನು ನೇವಲ್ ಮೈನ್ಸ್ ಎಂದು ಕರೆಯಲಾಗುತ್ತದೆ.
ಈ ಮೈನ್ಸ್ಗಳನ್ನು ಹಡಗುಗಳು ಅಥವಾ ಜಲಾಂತರ್ಗಾಮಿಗಳು ಸಮೀಪಿಸಿದಾಗ ಅಥವಾ ಅವುಗಳಿಗೆ ತಾಗಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟಾಗುತ್ತದೆ.
ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ? : ಕೆಲವು ನೇವಲ್ ಮೈನ್ಸ್ ಸಮುದ್ರದ ತಳದಲ್ಲಿ ಅಳವಡಿಸಲಾಗುತ್ತದೆ. ಇನ್ನು ಕೆಲವು ನೀರಿನಲ್ಲಿ ತೇಲುವ ರೀತಿಯಲ್ಲಿ ಇರುತ್ತವೆ. ಹಡಗುಗಳು ಹತ್ತಿರ ಬಂದಾಗ ಅವುಗಳ ಕಾಂತೀಯ ಕ್ಷೇತ್ರ, ಪ್ರೊಪೆಲ್ಲರ್ ಶಬ್ದ ಅಥವಾ ನೀರಿನ ಒತ್ತಡದಲ್ಲಿ ಆಗುವ ಬದಲಾವಣೆಯನ್ನು ಪತ್ತೆಹಚ್ಚಿ ಈ ಸ್ಫೋಟಕಗಳು ಸ್ಫೋಟಗೊಳ್ಳುವಂತೆ ತಂತ್ರಜ್ಞಾನ ಬಳಸಲಾಗುತ್ತದೆ.
ಹೇಗೆ ಅಳವಡಿಸಲಾಗುತ್ತದೆ? : ನೇವಲ್ ಮೈನ್ಸ್ಗಳನ್ನು ವಿಶೇಷ ಹಡಗುಗಳು, ಜಲಾಂತರ್ಗಾಮಿಗಳು ಅಥವಾ ವಿಮಾನಗಳ ಮೂಲಕ ಸಮುದ್ರದಲ್ಲಿ ಅಳವಡಿಸಲಾಗುತ್ತದೆ. ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಶತ್ರು ಹಡಗುಗಳ ಸಂಚಾರವನ್ನು ತಡೆಯಲು ಇದು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ.
ತಜ್ಞರ ಪ್ರಕಾರ ಇರಾನ್ ದೇಶೀಯವಾಗಿ ನೇವಲ್ ಮೈನ್ಸ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಕೆಲವು ಸುಧಾರಿತ ತಂತ್ರಜ್ಞಾನವನ್ನು ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾದಿಂದ ಪಡೆದಿರುವ ಸಾಧ್ಯತೆಯೂ ಇದೆ. ಅಮೆರಿಕದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಸೆಕ್ಯುರಿಟಿಯ ಅಂದಾಜಿನ ಪ್ರಕಾರ ಇರಾನ್ ಬಳಿ ಸುಮಾರು 2,000 ರಿಂದ 5,000 ನೇವಲ್ ಮೈನ್ಸ್ ಇರಬಹುದೆಂದು ಹೇಳಲಾಗಿದೆ.