ಮಾಸ್ಕೋ, ಮಾ. 11 (DaijiworldNews/AA): ಇರಾನ್- ಇಸ್ರೇಲ್ ನಡುವಿನ ಯುದ್ಧದ ಲಾಭಪಡೆಯುವುದಕ್ಕೆ ರಷ್ಯಾ ಮುಂದಾಗಿದ್ದು, ರಿಯಾಯಿತಿ ದರದಲ್ಲಿ ತೈಲ ಮಾರಾಟವನ್ನು ಸ್ಥಗಿತಗೊಳಿಸಿದೆ.

ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳಿಗೂ ಲಾಭವಾಗುತ್ತಿತ್ತು. ಆದರೆ ಈ ವರೆಗೂ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡುತ್ತಿದ್ದ ರಷ್ಯಾ ಈಗ ರಿಯಾಯಿತಿಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ವರದಿಯಾಗಿದೆ.
ಈಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ತೈಲ ಬೆಲೆಗಳು 2022 ರಿಂದ ಇದೇ ಮೊದಲ ಬಾರಿಗೆ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಗೆ ತಲುಪಿದೆ.
ನೀವು ನಮಗೆ ಮಾಹಿತಿಯೇ ನೀಡದೆ ನಮ್ಮಿಂದ ತೈಲ ಖರೀದಿಯನ್ನು ಏಕಾಏಕಿ ಸ್ಥಗಿತಗೊಳಿಸಿದಿರಿ, ಈಗ ದಿಢೀರ್ ರಿಯಾಯಿತಿ ದರದಲ್ಲಿ ತೈಲ ಪೂರೈಕೆಗೆ ಕೇಳುತ್ತಿದ್ದೀರಾ? ಭಾರತದೊಂದಿಗಿನ ಮುಂದಿನ ತೈಲ ವ್ಯಾಪಾರ ಸಂಪೂರ್ಣವಾಗಿ ವಾಣಿಜ್ಯ ನೆಲೆಯಲ್ಲಿ ನಡೆಯುತ್ತದೆಯೇ ಹೊರತು ಈ ಹಿಂದಿನ ರಿಯಾಯಿತಿ ದರದಲ್ಲಿ ಅಲ್ಲ ಎಂದು ಭಾರತಕ್ಕೆ ವ್ಲಾದಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಯುದ್ಧ ಆರಂಭವಾದಾಗಿನಿಂದ ಭಾರತಕ್ಕೆ ರಷ್ಯಾ ತೈಲವನ್ನು ಖರೀದಿಸಲು ಅಮೆರಿಕ 30 ದಿನಗಳ ಅನುಮತಿ ನೀಡಿತ್ತು. ರಷ್ಯಾದಿಂದ ತೈಲ ಖರೀದಿಸಲು ನಮಗೆ ಯಾರ ಅನುಮತಿಯೂ ಬೇಡ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತ್ತು.