ವಾಷಿಂಗ್ಟನ್, ಮಾ. 10 (DaijiworldNews/AA): ಇರಾನ್ನಿಂದ ಖಡಕ್ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರು ತೈಲ ಟ್ಯಾಂಕರ್ಗೆ ಅಮೆರಿಕ ನೌಕಾಪಡೆ ಬೆಂಗಾವಲು ನೀಡಿದೆ ಎಂಬ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆಯ ಬೆಂಗಾವಲಿನಲ್ಲಿ ತೈಲ ಟ್ಯಾಂಕರ್ ಯಶಸ್ವಿಯಾಗಿ ಸಾಗಿದೆ ಎಂದು ಕ್ರಿಸ್ ರೈಟ್ ಖಾತೆಯಿಂದ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಇರಾನ್ ಸ್ಪೀಕರ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು, "ಅಮೆರಿಕ ನೌಕಾಪಡೆಯ ಹಡಗುಗಳ ಬೆಂಗಾವಲಿನಿಂದ ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿದೆಯೇ? ಬಹುಶಃ ಪ್ಲೇಸ್ಟೇಷನ್ನಲ್ಲಿ ಇರಬೇಕು" ಎಂದು ಹೇಳಿದ್ದಾರೆ.
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ ವಕ್ತಾರ ವಕ್ತಾರ ಅಲಿಮೊಹಮ್ಮದ್ ನೈನಿ ಅವರು, "ಅಮೆರಿಕದ ಈ ಹೇಳಿಕೆ ಸಂಪೂರ್ಣ ಸುಳ್ಳು, ಕಟ್ಟು ಕಥೆ. ಅಮೆರಿಕದ ನೌಕಾಪಡೆ ಮತ್ತು ಅದರ ಮಿತ್ರರಾಷ್ಟ್ರಗಳ ಯಾವುದೇ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿದರೆ ಅವುಗಳನ್ನು ನಮ್ಮ ಕ್ಷಿಪಣಿಗಳು ಮತ್ತು ಡ್ರೋನ್ಗಳು ತಡೆಯುತ್ತವೆ. ಸಂಘರ್ಷ ಆರಂಭವಾದ ಬಳಿಕ ಯಾವುದೇ ಅಮೆರಿಕದ ಯುದ್ಧನೌಕೆ ಜಲಸಂಧಿಯನ್ನು ಸಮೀಪಿಸಲು ಧೈರ್ಯವೇ ಮಾಡಿಲ್ಲ" ಎಂದಿದ್ದಾರೆ.
ಕ್ರಿಸ್ ರೈಟ್ ಅವರ ಹೇಳಿಕೆಯನ್ನು ಇರಾನ್ ಸುಳ್ಳು ಎಂದು ಹೇಳಿದ ಬೆನ್ನಲ್ಲೇ ಎಕ್ಸ್ನಲ್ಲಿ ಮಾಡಿದ್ದ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ. ಡಿಲೀಟ್ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿರುವ ಅಮೆರಿಕದ ಇಂಧನ ಇಲಾಖೆಯ ವಕ್ತಾರ ಬೆನ್ ಡಯೆಟ್ಡೆರಿಚ್, "ಇಲಾಖೆಯ ಸಿಬ್ಬಂದಿ ತಪ್ಪಾಗಿ ಶೀರ್ಷಿಕೆ ನೀಡಿದ್ದರಿಂದ ಪೋಸ್ಟ್ ಅನ್ನು ತೆಗೆದುಹಾಕಿದ್ದೇವೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ" ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಅಮೆರಿಕದ ಅಧ್ಯಕ್ಷರ ನಿವಾಸ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಅವರು, "ಅಮೆರಿಕದ ಹಡಗು ಹಾರ್ಮುಜ್ ಜಲಸಂಧಿಯಲ್ಲಿ ಮೂಲಕ ಹಾದು ಹೋಗಿಲ್ಲ. ಫೆ. 28 ರಂದು ದಾಳಿ ಪ್ರಾರಂಭವಾದಾಗಿನಿಂದ ಯುಎಸ್ ಯುದ್ಧನೌಕೆಗಳಿಂದ ಬೆಂಗಾವಲು ಪಡೆದ ಯಾವುದೇ ವಾಣಿಜ್ಯ ಹಡಗುಗಳು ಬಂದಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.