ಟೆಹ್ರಾನ್, ಮಾ. 07 (DaijiworldNews/AA): ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' ದಾಳಿಯ ಬಳಿಕ ಸಂಭವಿಸಿದ ಕ್ಷಿಪಣಿ ಸಂಘರ್ಷದಲ್ಲಿ ಅರಬ್ ರಾಷ್ಟ್ರಗಳಿಗೆ ಆದ ಹಾನಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕ್ಷಮೆ ಕೇಳಿದ್ದಾರೆ.

ಇರಾನ್ ಸರ್ಕಾರಿ ವಾಹಿನಿಯಲ್ಲಿ ಅಧಿಕೃತವಾಗಿ ಕ್ರಮೆಯಾಚಿಸಿದ ಅವರು, "ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸಬೇಕು. ನೆರೆಹೊರೆಯ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ಇರಾನ್ನ ಮಧ್ಯಂತರ ನಾಯಕತ್ವ ಮಂಡಳಿ ನಿರ್ಧರಿಸಿದೆ. ಆದರೆ, ಆ ದೇಶಗಳ ನೆಲದಿಂದ ಇರಾನ್ ಮೇಲೆ ದಾಳಿ ನಡೆದರೆ ಮಾತ್ರ ತಿರುಗೇಟು ನೀಡುವುದಾಗಿ" ಎಚ್ಚರಿಕೆ ನೀಡಿದ್ದಾರೆ.
"ನಾವು ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ. ಇರಾನ್ ಜನರ ಶರಣಾಗತಿಯ ಆಶಯವನ್ನು ಶತ್ರುಗಳು ತಮ್ಮ ಸಮಾಧಿಗೆ ಕೊಂಡೊಯ್ಯಬೇಕು" ಎಂದು ಸ್ಪಷ್ಟಪಡಿಸಿದೆರು.
ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳು ಸೇರಿದಂತೆ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕಾರವಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳು ದುಬೈ, ಅಬುಧಾಬಿ, ಕತಾರ್ ಮತ್ತು ಬಹ್ರೇನ್ನಂತಹ ಗಲ್ಫ್ ರಾಷ್ಟ್ರಗಳಿಗೂ ತಗುಲಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು. ಅಲ್ಲದೆ ಬುರ್ಜ್ ಅಲ್ ಅರಬ್ ಹೋಟೆಲ್ ಮತ್ತು ಸೌದಿ ಅರಾಮ್ಕೊ ತೈಲ ಸಂಸ್ಕರಣಾ ಕೇಂದ್ರಗಳ ಮೇಲೆಯೂ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ.