ಇಸ್ಲಾಮಾಬಾದ್, ಮಾ. 07 (DaijiworldNews/AA): ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯನ್ನು 55 ಪಾಕಿಸ್ತಾನ ರೂಪಾಯಿ ಏರಿಕೆ ಮಾಡಿದೆ.

ಹೊಸ ಬೆಲೆಗಳ ಅನ್ವಯ ಪೆಟ್ರೋಲ್ ಬೆಲೆ 321.17 ರೂ. ತಲುಪಿದ್ದು, ಡೀಸೆಲ್ ಬೆಲೆ 275.70 ರೂ.ನಿಂದ ರಿಂದ 335.86 ರೂ.ಗೆ ಏರಿಕೆಯಾಗಿದೆ. ಸಂಘರ್ಷ ತೀವ್ರವಾದ ಹಿನ್ನಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಭಾರೀ ಏರಿಕೆಯಾಗಿದ್ದು, ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಕ್ಷಣ ಹೆಚ್ಚಿಸುವಂತೆ ಒತ್ತಾಯಿಸಿತ್ತು.
ದೇಶದಲ್ಲಿ ಇಂಧನ ಕೊರತೆಯಾಗಬಹುದು ಎಂಬ ಸುದ್ದಿ ಹಬ್ಬಿದ್ದರಿಂದ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್ ತುಂಬಿಸಲು ಬಂಕ್ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಬಂಕ್ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಅವರು, ಅಂತರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಕಳೆದ ಎರಡು ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ವೇಗವಾಗಿ ವಿಸ್ತರಿಸಿದ ಪರಿಣಾಮ ಜಾಗತಿಕ ಪೆಟ್ರೋಲಿಯಂ ದರಗಳು ಗಗನಕ್ಕೇರಿವೆ ಎಂದು ತಿಳಿಸಿದರು.