ಟೆಹ್ರಾನ್, ಮಾ. 05 (DaijiworldNews/AA): ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವುಗಳ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಇರಾನ್ ತಿಳಿಸಿದೆ.

ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಈ ನಿರ್ಧಾರವನ್ನು ಇರಾನಿನ ಸರ್ಕಾರಿ ಮಾಧ್ಯಮ ವರದಿ ಮಾಡಿದ್ದು, "ಅಂತರರಾಷ್ಟ್ರೀಯ ಕಾನೂನು ಮತ್ತು ಸಂಬಂಧಿತ ನಿರ್ಣಯಗಳಿಗೆ ಅನುಗುಣವಾಗಿ, ಯುದ್ಧದ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಕ್ಕನ್ನು ಇರಾನ್ ಕಾಯ್ದಿರಿಸಿದೆ. ಜಲಮಾರ್ಗದಲ್ಲಿ ಸಂಚರಿಸುವ ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಅವರನ್ನು ಬೆಂಬಲಿಸುವ ಯಾವುದೇ ಹಡಗುಗಳು ಹೊಡೆದು ಹಾಕುತ್ತೇವೆ ಎಂದು ಹೇಳಿದೆ.
ಫೆ. 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಜಲಸಂಧಿಯನ್ನು ಮುಚ್ಚಲಾಗಿದೆ. ಮಾ.3 ರಂದು ಚೀನಾ ಧ್ವಜ ಹೊಂದಿರುವ ಹಡಗುಗಳಿಗೆ ಮಾತ್ರ ಜಲಸಂಧಿಯನ್ನು ಬಳಸಲು ಅವಕಾಶ ನೀಡುವುದಾಗಿ ಇರಾನ್ ತಿಳಿಸಿತ್ತು.
ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಸಾಗಣೆಗೆ ಇಲ್ಲಿಯವರೆಗೆ ಯಾರು ಮುಚ್ಚುವ ಸಾಹಸಕ್ಕೆ ಕೈ ಹಾಕಿರಲಿಲ್ಲ. 1980 ರಿಂದ 1988 ರ ಇರಾನ್-ಇರಾಕ್ ಯುದ್ಧದ ಸಮಯದಲ್ಲಿಯೂ ಸಹ, ತೈಲ ಟ್ಯಾಂಕರ್ಗಳ ಮೇಲೆ ಪದೇ ಪದೇ ದಾಳಿ ನಡೆದಿದ್ದರೂ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿರಲಿಲ್ಲ.
ಭಾರತಕ್ಕೆ ಈ ಜಲಸಂಧಿಯನ್ನು ಬಳಸಲು ಇರಾನ್ ಅವಕಾಶ ನೀಡುವ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ದೊರೆತಿಲ್ಲ. ಭಾರತ ಸೌದಿ ಅರೇಬಿಯಾ, ಯುಎಇಯಿಂದ ಕಚ್ಚಾ ತೈಲ, ಕತಾರ್ನಿಂದ ನೈಸರ್ಗಿಕ ಅನಿಲವನ್ನು ಖರೀದಿ ಮಾಡುತ್ತಿದೆ. ಯುಎಇ, ಸೌದಿ ಅರೇಬಿಯಾ, ಕತಾರ್ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಇವುಗಳು ಅಮೆರಿಕ ಮಿತ್ರಪಕ್ಷವಾಗಿರುವುದರಿಂದ ಈ ದೇಶಗಳಿಂದ ಬರುವ ಹಡಗುಗಳ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.