ಇಸ್ಲಾಮಾಬಾದ್, ಮಾ. 04 (DaijiworldNews/AA): ಸೌದಿ ಅರೇಬಿಯಾ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ ಎಂದು ಇರಾನ್ಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ.

ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ಮಿಲಿಟರಿ ಒಪ್ಪಂದ ಹೊಂದಿದೆ. ಈ ಒಪ್ಪಂದದ ಪ್ರಕಾರ ಈ ಇಬ್ಬರಲ್ಲಿ ಯಾರ ಮೇಲೆ ಆಕ್ರಮಣವಾದರೂ ಮತ್ತೊಬ್ಬರು ನೆರವಿಗೆ ಧಾವಿಸಬೇಕು. ಈಗ ಸೌದಿ ಅರೇಬಿಯಾದ ಪ್ರಮುಖ ನಗರಗಳ ಮೇಲೆ ಇರಾನ್ ದಾಳಿ ಎಸಗುತ್ತಿರುವುದರಿಂದ ಪಾಕಿಸ್ತಾನವು ಒಪ್ಪಂದದ ಪ್ರಕಾರ ಇರಾನ್ಗೆ ಪಾಕಿಸ್ತಾನ ಎಚ್ಚರಿಕೆ ಸಂದೇಶ ರವಾನಿಸಿದೆ.
"ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಹೊಂದಿದೆ. ಇದು ಇಡೀ ವಿಶ್ವಕ್ಕೆ ಗೊತ್ತಿದೆ. ಒಪ್ಪಂದಕ್ಕೆ ಪಾಕಿಸ್ತಾನ ಕಟ್ಟುಬಿದ್ದಿದೆ. ಈ ಒಪ್ಪಂದವು ಇರಾನ್ ಗಮನಕ್ಕಿರಬೇಕು. ಇರಾನ್ನ ನಾಯಕತ್ವ ಸ್ಥಾನದಲ್ಲಿರುವ ನಮ್ಮ ಸಹೋದರರಿಗೆ ಇದನ್ನು ನೆನಪಿಸಲು ಇಚ್ಛಿಸುತ್ತೇನೆ" ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ.
"ಸೌದಿ ಅರೇಬಿಯಾದಲ್ಲಿ ಇಸ್ಲಾಮ್ ಧರ್ಮದ ಆತ್ಮ ಇದೆ. ಮೆಕ್ಕಾ ಮಸೀದಿ ಮತ್ತು ಮದೀನಾದಲ್ಲಿ ಪ್ರವಾದಿಗಳ ಮಸೀದಿ ಇರುವುದು ಸೌದಿಯಲ್ಲೇ. ಇಸ್ಲಾಮ್ ಧರ್ಮ ಹುಟ್ಟಿದ್ದೂ ಇಲ್ಲೇ. ತನಗೆ ಈ ಧಾರ್ಮಿಕ ಸ್ಥಳದ ರಕ್ಷಣೆಯೇ ಮೊದಲ ಆದ್ಯತೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪ್ರತಿಯೊಂದು ವೇದಿಕೆಯಲ್ಲೂ, ಪ್ರತಿಯೊಂದು ಕ್ಷೇತ್ರದಲ್ಲೂ ಸೌದಿ ಅರೇಬಿಯಾಗೆ ಬೆಂಬಲವಾಗಿ ನಿಂತಿದ್ದೇವೆ" ಎಂದು ಪಾಕ್ ಹೇಳಿದೆ.
ಇರಾನ್ನಲ್ಲಿ ಆಡಳಿತ ಬದಲಾದರೆ ಇರಾನ್, ಅಫ್ಗಾನಿಸ್ತಾನ್ ಮತ್ತು ಭಾರತದ ಮೂಲಕ ಪಾಕಿಸ್ತಾನಕ್ಕೆ ತೊಂದರೆ ಕೊಡುವ ಸಂಚು ನಡೆದಿದೆ. ಪಾಕಿಸ್ತಾನದ 25 ಕೋಟಿ ಜನರು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಶತ್ರುಗಳ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ಖವಾಜ ಹೇಳಿದ್ದಾರೆ.