ಜೆರುಸಲೇಂ, ಮಾ. 04 (DaijiworldNews/AA): ಟೆಹ್ರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಇರಾನ್ನ ನೂತನ ಸುಪ್ರೀಂ ನಾಯಕ ಮೊಜ್ತಾಬಾ ನನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜೀವ ಬೆದರಿಕೆ ಹಾಕಿದ್ದಾರೆ.

ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಖಾಲಿಯಾಗಿರುವ ನಾಯಕತ್ವ ಸ್ಥಾನವನ್ನು ವಹಿಸಿಕೊಳ್ಳಲು ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವರದಿಯಾದ ಬೆನ್ನಲ್ಲೇ ಕಾಟ್ಜ್ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ "ಇಸ್ರೇಲ್ ಅನ್ನು ನಾಶಮಾಡುವ, ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಸುತ್ತಲಿನ ಪ್ರದೇಶದ ದೇಶಗಳಿಗೆ ಬೆದರಿಕೆ ಹಾಕುವ ಮತ್ತು ಇರಾನಿನ ಜನರನ್ನು ನಿಗ್ರಹಿಸುವ ಸಲುವಾಗಿ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಯಾವುದೇ ನಾಯಕನನ್ನು ಹತ್ಯೆ ಮಾಡಲಾಗುತ್ತದೆ. ಆತ ಎಲ್ಲೇ ಅಡಗಿದ್ದರೂ ನಾವು ಬಿಡುವುದಿಲ್ಲ. ಆತ ಯಾರೇ ಆಗಿರಲಿ ಅದು ನಮಗೆ ಮುಖ್ಯವಲ್ಲ" ಎಂದು ಎಚ್ಚರಿಸಿದ್ದಾರೆ.