ವಾಷಿಂಗ್ಟನ್, ಮಾ. 02 (DaijiworldNews/AA): ಹಲವಾರು ಅರಬ್ ರಾಷ್ಟ್ರಗಳು ಅಮೆರಿಕದ ಜೊತೆ ಸೇರಲು ಬಯಸುತ್ತಿವೆ ಮತ್ತು ಇರಾನ್ ವಿರುದ್ಧದ ದಾಳಿ 4-5 ವಾರಗಳವರೆಗೆ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

"ಬಹರೇನ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಪ್ರಾದೇಶಿಕ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡಿದೆ. ಈಗ ಈ ದೇಶಗಳು ತಮ್ಮ ನಿಲುವು ಬದಲಾಯಿಸಿ ಅಮೆರಿಕ ಜೊತೆ ಸೇರಲು ಬಯಸುತ್ತೇವೆ ಎಂದು ಹೇಳಿರುವುದು ನನಗೆ ಬಹಳ ಆಶ್ಚರ್ಯ ತಂದಿದೆ" ಎಂದರು.
"ಇರಾನ್ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದಕ್ಕೆ ಈ ದೇಶಗಳು ಆಕ್ರೋಶಗೊಂಡಿವೆ. ಈ ದಾಳಿಯ ನಂತರ ಅವರ ನಿಲುವುಗಳಲ್ಲಿ ಅಚ್ಚರಿಯ ಬದಲಾವಣೆಯಾಗಿದೆ. ಇರಾನ್ ದಾಳಿಯನ್ನು ಈ ದೇಶಗಳು ಖಂಡಿಸಿದ್ದರೂ ಹೆಚ್ಚಿನವು ಇಲ್ಲಿಯವರೆಗೆ ಮಿಲಿಟರಿ ಸಂಯಮವನ್ನು ಹೊಂದಿವೆ" ಎಂದು ಹೇಳಿದರು.
"ಇರಾನ್ ವಿರುದ್ಧದ ದಾಳಿ 4-5 ವಾರಗಳಲ್ಲಿ ಮುಗಿಸಲು ಯೋಜಿಸಿದ್ದೇವೆ. ಅದಕ್ಕಿಂತ ಹೆಚ್ಚು ಸಮಯ ಹೋದರೂ ನಾವು ಸಿದ್ಧರಿದ್ದೇವೆ. ಅಮೆರಿಕವು ವಿಶ್ವದ ಶ್ರೇಷ್ಠ ಸೈನ್ಯವನ್ನು ಹೊಂದಿದೆ. ನಮ್ಮ ಕಾರ್ಯಾಚರಣೆ ತುಂಬಾ ಶಕ್ತಿಶಾಲಿಯಾಗಿವೆ. ನಾವು ಇನ್ನೂ ಅವರ ಮೇಲೆ ಬಲವಾದ ದಾಳಿ ಆರಂಭಿಸಿಲ್ಲ. ದೊಡ್ಡ ಅಲೆ ಇನ್ನೂ ಎದ್ದಿಲ್ಲ. ದೊಡ್ಡ ಅಲೆ ಶೀಘ್ರದಲ್ಲೇ ಬರಲಿದೆ" ಎಂದು ಎಚ್ಚರಿಸಿದರು.
"ಇರಾನ್ ಈಗಾಗಲೇ ಯುರೋಪ್ ತಲುಪುವ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದೆ. ಶೀಘ್ರವೇ ಅವರ ಕ್ಷಿಪಣಿಗಳು ಅಮೆರಿಕವನ್ನು ತಲುಪುವ ಸಾಧ್ಯತೆ ಇತ್ತು. ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವು ವೇಗವಾಗಿ ಮತ್ತು ನಾಟಕೀಯವಾಗಿ ಬೆಳೆಯುತ್ತಿತ್ತು. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಬಳಕೆ ಮಾಡಬಾರದು ಎಂದು ನಾವು ಅವರ ಪರಮಾಣ ಸ್ಥಾವರದ ಮೇಲೆಯೇ ದಾಳಿ ಮಾಡಿದ್ದೇವೆ. ಭಯೋತ್ಪಾದಕ ದೇಶವಾಗಿರುವ ಇರಾನ್ ಆಡಳಿತವನ್ನು ಕೊನೆಗೊಳಿಸುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.