ವಾಷಿಂಗ್ಟನ್, ಮಾ. 01 (DaijiworldNews/TA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆಯಾದರು ಎಂದು ಘೋಷಿಸಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಖಮೇನಿ ಅವರನ್ನು “ವಿಶ್ವ ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬ” ಎಂದು ಕರೆದಿದ್ದಾರೆ. ಖಮೇನಿ ಸಾವಿನಿಂದ ಇರಾನ್ ಜನತೆಗೆ ತಮ್ಮ ದೇಶವನ್ನು ಮರಳಿ ಪಡೆಯುವ ಅವಕಾಶ ಸಿಕ್ಕಂತಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಗಳ ಸಮನ್ವಯದಿಂದ ನಡೆದ ನಿಖರ ಬಾಂಬ್ ದಾಳಿಯಲ್ಲಿ ಟೆಹ್ರಾನ್ನಲ್ಲಿರುವ ಖಮೇನಿ ನಿವಾಸವನ್ನು ಗುರಿಯಾಗಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಗತ್ಯವಿದ್ದರೆ ಮುಂದುವರಿದೂ ಭಾರೀ ಹಾಗೂ ನಿಖರ ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಕೆಲವೇ ಗಂಟೆಗಳ ಮೊದಲು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ದೂರದರ್ಶನ ಭಾಷಣದಲ್ಲಿ ಖಮೇನಿ ಇರುವ ಕಾಂಪೌಂಡ್ ಮೇಲೆ ಸುಮಾರು 30 ಬಾಂಬ್ಗಳನ್ನು ಹಾಕಲಾಗಿದೆ ಎಂದು ಹೇಳಿದ್ದರು. ದಾಳಿಯ ನಂತರ ಖಮೇನಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಇರಾನ್ ಸರ್ಕಾರ ಇದುವರೆಗೆ ಅಧಿಕೃತವಾಗಿ ಖಮೇನಿ ಸಾವಿನ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಇರಾನ್ ವಿದೇಶಾಂಗ ಸಚಿವರು ದೇಶದ ಉನ್ನತ ನಾಯಕತ್ವ ಸುರಕ್ಷಿತವಾಗಿದೆ ಎಂದು ಹೇಳಿರುವ ವರದಿಗಳೂ ಪ್ರಸಾರವಾಗಿವೆ. ಅಮೆರಿಕ–ಇಸ್ರೇಲ್ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಈಗಾಗಲೇ ಪ್ರದೇಶದಲ್ಲಿನ ಕೆಲವು ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿದೆ. ಗಲ್ಫ್ ರಾಷ್ಟ್ರಗಳು ತಕ್ಷಣವೇ ಹಿಂಸಾಚಾರ ನಿಲ್ಲಿಸಿ ಶಾಂತಿ ಮಾತುಕತೆಗಳಿಗೆ ಮುಂದಾಗುವಂತೆ ಕರೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಈ ಘಟನೆಗಳ ಮೇಲೆ ನಿಕಟವಾಗಿ ಕಣ್ಣುಹಾಯಿಸಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ರಾಜಕೀಯ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.