ವಾಷಿಂಗ್ಟನ್, ಜ.30 (DaijiworldNews/TA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಅಲೆ ಎಬ್ಬಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಕ್ಯೂಬಾಗೆ ತೈಲ ಸರಬರಾಜು ಮಾಡುವ ಯಾವುದೇ ದೇಶಗಳ ಮೇಲೂ ಹೊಸ ಸುಂಕ (ಟ್ಯಾರಿಫ್) ವಿಧಿಸಲಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಕ್ಯೂಬಾದ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದ ಕಾರ್ಯಕಾರಿ ಆದೇಶಕ್ಕೆ ಅವರು ಸಹಿ ಹಾಕಿದ್ದಾರೆ.

ಶ್ವೇತಭವನ ಈ ವಿಷಯವನ್ನು ದೃಢಪಡಿಸಿದ್ದು, ಕ್ಯೂಬಾಗೆ ತೈಲ ಮಾರಾಟ ಮಾಡುವ ರಾಷ್ಟ್ರಗಳ ಸರಕುಗಳ ಮೇಲೆ ಸುಂಕ ವಿಧಿಸುವುದರ ಜೊತೆಗೆ, ಕ್ಯೂಬಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಗೂ ಈ ಆದೇಶ ಅವಕಾಶ ನೀಡುತ್ತದೆ ಎಂದು ತಿಳಿಸಿದೆ.
ಟ್ರಂಪ್ ಆಡಳಿತವು ಕ್ಯೂಬಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕ ಸೇನೆ ವೆನೆಜುವೆಲಾದ ಮೇಲೆ ದಾಳಿ ನಡೆಸಿ, ಆಗಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದಿತ್ತು. ಆ ಬಳಿಕ, ಮಡುರೊ ಅವರ ಆಪ್ತ ಮಿತ್ರ ರಾಷ್ಟ್ರವಾಗಿರುವ ಕ್ಯೂಬಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಪದೇಪದೇ ಎಚ್ಚರಿಕೆ ನೀಡುತ್ತಿದ್ದಾರೆ.
ಈ ಕಾರ್ಯಕಾರಿ ಆದೇಶದಲ್ಲಿ ಸುಂಕದ ದರ ಎಷ್ಟು ಎಂಬುದು ಅಥವಾ ಯಾವ ದೇಶಗಳು ಅಮೆರಿಕದ ಸುಂಕಗಳಿಗೆ ಒಳಪಡುವ ಸಾಧ್ಯತೆ ಇದೆ ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಕ್ಯೂಬಾಗೆ ತೈಲ ರಫ್ತು ಮಾಡುವ ರಾಷ್ಟ್ರಗಳಿಗೆ ಈ ಆದೇಶ ಗಂಭೀರ ಎಚ್ಚರಿಕೆಯಾಗಿ ಪರಿಗಣಿಸಲಾಗುತ್ತಿದೆ.
ಕ್ಯೂಬಾ ದಶಕಗಳಿಂದ ತನ್ನ ಮಿತ್ರ ರಾಷ್ಟ್ರವಾದ ವೆನೆಜುವೆಲಾದಿಂದ ತೈಲ ಪೂರೈಕೆಯನ್ನು ಪಡೆಯುತ್ತಿತ್ತು. ಆದರೆ, ನಿಕೋಲಸ್ ಮಡುರೊ ಅಮೆರಿಕದ ವಶದಲ್ಲಿರುವ ಹಿನ್ನೆಲೆಯಲ್ಲಿ, ವೆನೆಜುವೆಲಾದಿಂದ ಕ್ಯೂಬಾಗೆ ತೈಲ ಮತ್ತು ಹಣದ ಹರಿವು ಸ್ಥಗಿತಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇತ್ತೀಚೆಗೆ, ಮೆಕ್ಸಿಕೋ ಸರ್ಕಾರವೂ ಕ್ಯೂಬಾಗೆ ತೈಲ ರಫ್ತನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ್ದು, ಕ್ಯೂಬಾದ ಮೇಲೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ.
ವೆನೆಜುವೆಲಾದಲ್ಲಿ ಸರ್ಕಾರ ಬದಲಾವಣೆ ಬಳಿಕ, ಇದೀಗ ಟ್ರಂಪ್ ಕ್ಯೂಬಾ ಸರ್ಕಾರದ ಪತನದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಅಲ್ಲದೆ, ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಕ್ಯೂಬಾದ ಹೊಸ ಅಧ್ಯಕ್ಷರನ್ನಾಗಿ ನೇಮಿಸುವ ಆಲೋಚನೆಯನ್ನು ಸಮರ್ಥಿಸಿಕೊಂಡಿರುವುದೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವೆನೆಜುವೆಲಾದ ಮೇಲಿನ ಅಮೆರಿಕದ ನಿಯಂತ್ರಣದ ಲಾಭವನ್ನು ಬಳಸಿಕೊಂಡು, ಟ್ರಂಪ್ ಇದೀಗ ಕ್ಯೂಬಾವನ್ನು ಅಮೆರಿಕದ ಪ್ರಭಾವಕ್ಕೆ ಒಳಪಡಿಸಲು ತೀವ್ರ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ.