ಅಮೇರಿಕಾ, ಜ. 28(DaijiworldNews/TA): ದೇಶದೊಳಗೆ ಸಾಮಾಜಿಕ, ಆರ್ಥಿಕ ಮತ್ತು ಭದ್ರತಾ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ಸರ್ಕಾರ ವಿದೇಶಿಗರ ವಲಸೆಯ ಕುರಿತಂತೆ ಕಠಿಣ ಕ್ರಮ ಕೈಗೊಂಡಿದ್ದು, ಒಟ್ಟು 75 ‘ಹೈ-ರಿಸ್ಕ್’ ದೇಶಗಳ ನಾಗರಿಕರಿಗೆ ನೀಡಲಾಗುತ್ತಿದ್ದ ವಲಸೆ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಈ ನಿರ್ಧಾರವು ಶಾಶ್ವತ ವಾಸಕ್ಕೆ ಸಂಬಂಧಿಸಿದ ವಲಸೆ ವೀಸಾಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಪ್ರವಾಸ, ವ್ಯವಹಾರ ಹಾಗೂ ತಾತ್ಕಾಲಿಕ ಕೆಲಸದ ವೀಸಾಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ನೆಲೆಯೂರಿ ಸರ್ಕಾರದ ಕಲ್ಯಾಣ ಯೋಜನೆಗಳ ಮೇಲೆ ಅವಲಂಬಿತರಾಗುವ ವಿದೇಶಿಗರ ಸಂಖ್ಯೆಯನ್ನು ಕಡಿತಗೊಳಿಸುವುದೇ ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಲಸಿಗರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಮತ್ತು ಅಮೆರಿಕನ್ನರಿಗೆ ಆರ್ಥಿಕ ಹೊರೆ ಆಗಬಾರದು ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಪಷ್ಟ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚಿನ ಅಪಾಯದ ದೇಶಗಳಿಂದ ಬರುವ ವಲಸಿಗರು ಸಾರ್ವಜನಿಕ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ತಡೆಯಲು ವಿದೇಶಾಂಗ ಇಲಾಖೆ ತನ್ನ ನೀತಿಗಳು, ನಿಯಮಗಳು ಮತ್ತು ಮಾರ್ಗಸೂಚಿಗಳ ಸಮಗ್ರ ಪರಿಶೀಲನೆಯನ್ನು ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ನಿರ್ಬಂಧವು ವಲಸೆ ವೀಸಾ ಅರ್ಜಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಅಂದರೆ, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವವರು, ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರು, ಅಮೆರಿಕ ನಾಗರಿಕರ ಸಂಗಾತಿಗಳು ಅಥವಾ ಕುಟುಂಬ ಸದಸ್ಯರಾಗಿ ವಲಸೆ ವೀಸಾ ಕೋರುವವರ ಅರ್ಜಿಗಳನ್ನು ಆಯ್ದ 75 ದೇಶಗಳ ಮಟ್ಟಿಗೆ ಮುಂದುವರಿಸಲಾಗುವುದಿಲ್ಲ. ಆದರೆ, ಪ್ರವಾಸ, ವ್ಯವಹಾರ ಅಥವಾ ಕೆಲಸದ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಅಮೆರಿಕಕ್ಕೆ ಹೋಗುವವರಿಗೆ ವೀಸಾ ನಿರಾಕರಣೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನ್, ರಷ್ಯಾ, ಸೊಮಾಲಿಯಾ, ನೈಜೀರಿಯಾ, ಬ್ರೆಜಿಲ್, ಥೈಲ್ಯಾಂಡ್ ಸೇರಿದಂತೆ ಒಟ್ಟು 75 ದೇಶಗಳ ನಾಗರಿಕರಿಗೆ ಈ ವಲಸೆ ವೀಸಾ ಸ್ಥಗಿತ ಅನ್ವಯವಾಗಲಿದೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ವಲಸೆ ಜಾರಿ ಇಲಾಖೆ (ಐಸಿಇ) ಸ್ಪಷ್ಟಪಡಿಸಿದೆ. ಈ ದೇಶಗಳ ನಾಗರಿಕರು ಅಮೆರಿಕಕ್ಕೆ ಪ್ರವಾಸ ಅಥವಾ ಕೆಲಸಕ್ಕಾಗಿ ಬರಬಹುದಾದರೂ, ಅಲ್ಲಿಯೇ ಶಾಶ್ವತವಾಗಿ ನೆಲೆಸಲು ವಲಸೆ ವೀಸಾ ಅಥವಾ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಇದರ ನಡುವೆ, ಈ ನಿರ್ಬಂಧವು ಭಾರತಕ್ಕೆ ಅನ್ವಯಿಸುವುದಿಲ್ಲ ಎಂಬುದು ಭಾರತೀಯರಿಗೆ ನಿರಾಳತೆಯನ್ನು ನೀಡಿದೆ. ಅಮೆರಿಕಕ್ಕೆ ಅತಿ ಹೆಚ್ಚು ವಲಸೆ ಹೋಗುವ ವಿದೇಶಿಗರ ಪೈಕಿ ಭಾರತೀಯರು ಪ್ರಮುಖ ಸ್ಥಾನದಲ್ಲಿದ್ದಾರೆ. ಆದರೂ, ಟ್ರಂಪ್ ಆಡಳಿತದ ಈ ನಿರ್ಧಾರವು ಭಾರತೀಯ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಭಾರತೀಯರು ಪ್ರವಾಸ, ಕೆಲಸ ಹಾಗೂ ಶಾಶ್ವತ ವಾಸಕ್ಕಾಗಿ ವಲಸೆ ವೀಸಾಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಮುಂದುವರಿಯಲಿದೆ.
ಅಮೆರಿಕದ ಸಾಮಾಜಿಕ ಭದ್ರತಾ ವ್ಯವಸ್ಥೆ ಬಲಿಷ್ಠವಾಗಿದ್ದು, ಕೆಲ ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಡ್ರಗ್ಸ್, ಅಪರಾಧ ಮತ್ತು ಭಯೋತ್ಪಾದನಾ ಚಟುವಟಿಕೆಗಳ ಮೂಲಕ ಸಮಾಜ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕವನ್ನು ಆಡಳಿತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿಯೇ ಜನವರಿ 21ರಿಂದ ಜಾರಿಗೆ ಬರುವಂತೆ ವಲಸೆ ವೀಸಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ.