ರಿಯಾದ್, ಜ. 26 (DaijiworldNews/TA): ಸೌದಿ ಅರೇಬಿಯಾ ಉಮ್ರಾ ಯಾತ್ರೆಗೆ ಸಂಬಂಧಿಸಿದ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಹಜ್ ಯಾತ್ರೆಯೊಂದಿಗೆ ಉಮ್ರಾ ವೀಸಾ ನಿರ್ವಹಣೆಗೆ ಸಂಬಂಧಿಸಿದಂತೆ ವೀಸಾ ಮಾನ್ಯತೆಯ ಅವಧಿ ಹಾಗೂ ಯಾತ್ರಿಕರ ಮರಳುವ ದಿನಾಂಕವನ್ನು ಸ್ಪಷ್ಟಪಡಿಸಲಾಗಿದೆ.

ಸೌದಿ ಅರೇಬಿಯಾದ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಆಗಮಿಸಲು ಕೊನೆಯ ದಿನಾಂಕ ಶವ್ವಾಲ್ 15, 1447 ಹಿಜ್ರಿ ಆಗಿರುತ್ತದೆ. ಅದೇ ರೀತಿ, ಉಮ್ರಾ ವೀಸಾದ ಮೇಲೆ ಬಂದ ಯಾತ್ರಿಕರು ದುಲ್-ಖಾದ್ 1, 1447 ಹಿಜ್ರಿಯೊಳಗೆ ಕಡ್ಡಾಯವಾಗಿ ದೇಶವನ್ನು ತೊರೆಯಬೇಕು ಎಂದು ತಿಳಿಸಲಾಗಿದೆ.
ವೀಸಾ ಮಾನ್ಯತೆ ಕುರಿತು ಸ್ಪಷ್ಟನೆ : ಸಾಮಾನ್ಯವಾಗಿ ಉಮ್ರಾ ವೀಸಾಗಳು ಮೂರು ತಿಂಗಳವರೆಗೆ ಮಾನ್ಯವಾಗಿರುತ್ತವೆ. ಆದರೆ, ಮೂರು ತಿಂಗಳ ಅವಧಿ ದುಲ್-ಖಾದ್ 1ರ ನಂತರಕ್ಕೆ ಬಿದ್ದರೂ ಸಹ, ಯಾತ್ರಿಕರು ಆ ದಿನಾಂಕದೊಳಗೆ ಮರಳುವುದು ಕಡ್ಡಾಯವಾಗಿದೆ.
ಯಾತ್ರಿಕರು ಉಮ್ರಾ ವೀಸಾದಡಿ ಮೂರು ತಿಂಗಳವರೆಗೆ ಉಳಿಯಬಹುದಾದ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಗಲ್ಫ್ ರಾಷ್ಟ್ರಗಳ ವಿವಿಧ ಭಾಗಗಳಲ್ಲಿ ಪ್ರಸ್ತುತ ಇರುವ ಶೀತ ವಾತಾವರಣದ ಪರಿಣಾಮವಾಗಿ ಉಮ್ರಾ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.