ವಾಷಿಂಗ್ಟನ್, ಜ. 24 (DaijiworldNews/TA): ಇರಾನ್ ವಿರುದ್ಧ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಕಡೆಗೆ ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ” ಎಂದು ಹೇಳಿದ್ದಾರೆ. ಈ ಪ್ರದೇಶಕ್ಕೆ ಬೃಹತ್ ನೌಕಾಪಡೆಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ ಅವರು, ಅದನ್ನು ಬಳಸುವ ಅಗತ್ಯ ಬರಬಾರದೆಂದು ಆಶಿಸುತ್ತಿರುವುದಾಗಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಇರಾನ್ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ನೂರಾರು ಪ್ರತಿಭಟನಾಕಾರರು ಹತ್ಯೆಯಾಗಿರುವ ಆರೋಪದ ಹಿನ್ನೆಲೆಯಲ್ಲಿ, ಟ್ರಂಪ್ ಅವರು ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಪದೇ ಪದೇ ಎಚ್ಚರಿಕೆ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಟ್ರಂಪ್ ಅವರ ಭಾಷೆ ಸ್ವಲ್ಪ ಮೃದುವಾಗಿದೆ.
ನೂರಾರು ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಇರಾನ್ ಸರ್ಕಾರದ ಯೋಜನೆಯನ್ನು ರದ್ದುಗೊಳಿಸುವಂತೆ ವಾಷಿಂಗ್ಟನ್ ನೀಡಿದ ಒತ್ತಡವೇ ಕಾರಣವಾಗಿದೆ ಎಂಬ ತಮ್ಮ ಹೇಳಿಕೆಯನ್ನು ಟ್ರಂಪ್ ಪುನರಾವರ್ತಿಸಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ಇರಾನ್ನಲ್ಲಿ ಆರ್ಥಿಕ ಸಂಕಷ್ಟದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಬಳಿಕ ರಾಷ್ಟ್ರವ್ಯಾಪಿ ಹರಡಿದ್ದವು. ಈ ಹಿನ್ನೆಲೆ, ಎರಡು ದಿನಗಳ ಹಿಂದಷ್ಟೇ ಟ್ರಂಪ್ ಅವರು, “ಇರಾನ್ ನನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದಲೇ ಅಳಿಸಿಹಾಕುತ್ತದೆ” ಎಂದು ತೀವ್ರ ಎಚ್ಚರಿಕೆ ನೀಡಿದ್ದರು. ನ್ಯೂಸ್ ನೇಷನ್ನ *‘ಕೇಟೀ ಪಾವ್ಲಿಚ್ ಟುನೈಟ್’* ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಹೇಳಿಕೆ ನೀಡಿದ್ದರು.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ, “ನಮ್ಮ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ವಿರುದ್ಧ ಯಾರಾದರೂ ಕೆಟ್ಟ ಉದ್ದೇಶದಿಂದ ಕೈ ಚಾಚಿದರೆ, ಆ ಕೈಯನ್ನು ಕತ್ತರಿಸುವುದಷ್ಟೇ ಅಲ್ಲದೆ, ಅವರ ಇಡೀ ದೇಶವನ್ನೇ ಸುಟ್ಟು ಹಾಕುತ್ತೇವೆ ಎಂಬುದು ಟ್ರಂಪ್ಗೆ ಚೆನ್ನಾಗಿ ಗೊತ್ತಿದೆ” ಎಂದು ತಿರುಗೇಟು ನೀಡಿದರು. ಖಮೇನಿಯವರ ಸುಮಾರು 40 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಬಗ್ಗೆ ಟ್ರಂಪ್ ಮಾತನಾಡಿದ ಬಳಿಕ ಈ ಎಚ್ಚರಿಕೆಗಳು ಮತ್ತಷ್ಟು ತೀವ್ರಗೊಂಡಿವೆ. ಈ ಹಿಂದೆ ಕೂಡ ಇರಾನ್ ತನ್ನ ವಿರುದ್ಧ ಹತ್ಯೆಗೆ ಸಂಚು ರೂಪಿಸಿದರೆ, ದೇಶವನ್ನೇ ಸಂಪೂರ್ಣವಾಗಿ ನಾಶಮಾಡುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿದ್ದಾಗಿ ಟ್ರಂಪ್ ಹೇಳಿದ್ದರು.
ಖಮೇನಿಯನ್ನು “ಅಸ್ವಸ್ಥ ವ್ಯಕ್ತಿ” ಎಂದು ಬಣ್ಣಿಸಿದ ಟ್ರಂಪ್, ಇರಾನ್ ತನ್ನ ದೇಶವನ್ನು ಸರಿಯಾಗಿ ಆಡಳಿತ ನಡೆಸಬೇಕು, ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು ಹಾಗೂ ದೇಶಕ್ಕೆ ಹೊಸ ನಾಯಕತ್ವ ಅಗತ್ಯವಿದೆ ಎಂದು ಹೇಳಿದ್ದಾರೆ. ಡಿಸೆಂಬರ್ 28ರಂದು ಆರಂಭವಾದ ಪ್ರತಿಭಟನೆಗಳ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದ್ದು, ಈ ನಡುವೆ ಅಮೆರಿಕದ ಮಿಲಿಟರಿ ಚಟುವಟಿಕೆಗಳು ಹೆಚ್ಚಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.