ವಾಷಿಂಗ್ಟನ್, ಜ. 21 (DaijiworldNews/AA): ನನ್ನ ಹತ್ಯೆಗೆ ಪ್ರಯತ್ನಗಳು ನಡೆದರೆ ಅಥವಾ ನನ್ನ ಹತ್ಯೆ ಮಾಡಿದ್ರೆ ಅಮೆರಿಕವು ಇರಾನ್ ದೇಶವನ್ನ ಸರ್ವನಾಶ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರು ಖಮೇನಿಯವರ ೪೦ ವರ್ಷಗಳ ಆಳ್ವಿಕೆಯನ್ನ ಕೊನೆಗೊಳಿಸಬೇಕೆಂದು ಕರೆ ನೀಡಿದ ಕೆಲ ದಿನಗಳ ಬಳಿಕ, ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಇರಾನ್ ಮಂಗಳವಾರ ಡೊನಾಲ್ಡ್ ಟ್ರಂಪ್ಗೆ ಎಚ್ಚರಿಸಿದೆ.
ನಮ್ಮ ನಾಯಕನ ಕಡೆಗೆ ಆಕ್ರಮಣಕಾರಿ ಕೈ ಚಾಚಿದರೆ, ನಾವು ಆ ಕೈಯನ್ನ ಕತ್ತರಿಸುವುದಲ್ಲದೆ, ಅವರ ಜಗತ್ತಿಗೂ ಬೆಂಕಿ ಹಚ್ಚುತ್ತೇವೆ ಎಂದು ಟ್ರಂಪ್ಗೆ ತಿಳಿದಿದೆ ಎಂದು ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಅಬೋಲ್ಫಜಲ್ ಶೇಕಾರ್ಚಿ ಹೇಳಿಕೆ ನೀಡಿದ್ದರು.
ಅಬೋಲ್ಫಜಲ್ ಶೇಕಾರ್ಚಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, "ತನ್ನ ಹತ್ಯೆಯ ಹಿಂದೆ ಇರಾನ್ ಕೈವಾಡವಿದ್ದರೆ, ಆ ದೇಶವನ್ನ ನಿರ್ಮೂಲನೆ ಮಾಡಲು ತನ್ನ ಸಲಹೆಗಾರರಿಗೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.