ಜಪಾನ್, ಜ. 21 (DaijiworldNews/ TA): ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಟೆಟ್ಸುಯಾ ಯಮಗಾಮಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಾರಾ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದ್ದು, ಈ ತೀರ್ಪು ಜಪಾನ್ ರಾಜಕೀಯ ಇತಿಹಾಸದಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರಕರಣಕ್ಕೆ ನ್ಯಾಯಾಂಗದ ಅಂತಿಮ ತೀರ್ಮಾನವಾಗಿದೆ.

2022ರ ಜುಲೈ 8ರಂದು ಜಪಾನ್ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಶಿಂಜೋ ಅಬೆ ಮೇಲೆ ಶೂಟರ್ ಟೆಟ್ಸುಯಾ ಯಮಗಾಮಿ ಗುಂಡು ಹಾರಿಸಿದ್ದ. ಗಂಭೀರವಾಗಿ ಗಾಯಗೊಂಡ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದರು. ಈ ಘಟನೆ ಜಪಾನ್ನಲ್ಲಿ ದಶಕಗಳ ಬಳಿಕ ನಡೆದ ಮೊದಲ ರಾಜಕೀಯ ಹತ್ಯೆಯಾಗಿ ದಾಖಲಾಗಿತ್ತು.
ನಾರಾ ನಗರದ ನಿವಾಸಿಯಾಗಿರುವ 41 ವರ್ಷದ ಟೆಟ್ಸುಯಾ ಯಮಗಾಮಿಯನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತ ಶಿಂಜೋ ಅಬೆ ಅವರ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದೇನೆ ಎಂದು ಹೇಳಿದ್ದಾನೆ. ತಾನು ದ್ವೇಷಿಸುತ್ತಿದ್ದ ಒಂದು ಸಂಘಟನೆಗೆ ಅಬೆ ಸಂಬಂಧ ಹೊಂದಿದ್ದಾರೆ ಎಂಬ ನಂಬಿಕೆಯೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದ.
ಅಕ್ಟೋಬರ್ನಲ್ಲಿ ಆರಂಭವಾದ ವಿಚಾರಣೆಯ ಸಂದರ್ಭದಲ್ಲಿ ಯಮಗಾಮಿ ಕೊಲೆಗೆ ತಪ್ಪೊಪ್ಪಿಕೊಂಡಿದ್ದ. ಯೂನಿಫಿಕೇಶನ್ ಚರ್ಚ್ಗೆ ಸಂಬಂಧಿಸಿದ ಗುಂಪಿಗೆ ಮಾಜಿ ಪ್ರಧಾನಿ ಅಬೆ ಕಳುಹಿಸಿದ್ದ ವೀಡಿಯೊ ಸಂದೇಶವನ್ನು ನೋಡಿದ ಬಳಿಕ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಎಲ್ಲ ಸಾಕ್ಷ್ಯಾಧಾರಗಳು ಮತ್ತು ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಟಿವಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ, ಗುಂಡೇಟಿನಿಂದ ಶಿಂಜೋ ಅಬೆ ಕುಸಿದು ಬೀಳುತ್ತಿರುವುದು, ಎದೆಯನ್ನು ಗಟ್ಟಿಯಾಗಿ ಒತ್ತಿಹಿಡಿದಿರುವುದು ಮತ್ತು ಅವರ ಶರ್ಟ್ ಸಂಪೂರ್ಣ ರಕ್ತದಿಂದ ತೊಯ್ದಿರುವುದು ಸ್ಪಷ್ಟವಾಗಿ ಕಾಣಿಸಿತ್ತು. ಈ ದೃಶ್ಯಗಳು ಜಗತ್ತಿನಾದ್ಯಂತ ಆಘಾತ ಮೂಡಿಸಿದ್ದವು.
ಶಿಂಜೋ ಅಬೆ ಜಪಾನ್ನ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು 2006–2007 ಮತ್ತು 2012–2020ರ ಅವಧಿಯಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಧಾನಮಂತ್ರಿ ಹುದ್ದೆ ತೊರೆದ ಬಳಿಕವೂ ಅವರು ಸಕ್ರಿಯ ರಾಜಕಾರಣಿಯಾಗಿದ್ದು, ನಿಯಮಿತ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂತಹ ಪ್ರಭಾವಿ ನಾಯಕನ ಹತ್ಯೆ ಜಪಾನ್ ರಾಜಕೀಯ ವಲಯಕ್ಕೆ ಭಾರೀ ಆಘಾತ ನೀಡಿತ್ತು.