ವಾಷಿಂಗ್ಟನ್, ಜ.18 (DaijiworldNews/TA): ಸಿರಿಯಾದಲ್ಲಿ ಮತ್ತೊಂದು ಸುತ್ತಿನ ಪ್ರತೀಕಾರದ ದಾಳಿಯನ್ನು ಅಮೆರಿಕ ನಡೆಸಿದ್ದು, ಅಲ್-ಖೈದಾಗೆ ಸಂಬಂಧಿಸಿದ ಪ್ರಮುಖ ಉಗ್ರ ನಾಯಕನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಈ ದಾಳಿ, ಕಳೆದ ತಿಂಗಳು ಇಬ್ಬರು ಅಮೆರಿಕನ್ ಸೈನಿಕರು ಮತ್ತು ಒಬ್ಬ ಅಮೆರಿಕನ್ ನಾಗರಿಕ ಭಾಷಾಂತರಕಾರನ ಹತ್ಯೆಗೆ ಕಾರಣವಾದ ಐಸಿಸ್ ಉಗ್ರನೊಂದಿಗೆ ನೇರ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ.

ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಜನವರಿ 16ರಂದು ವಾಯುವ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ ಬಿಲಾಲ್ ಹಸನ್ ಅಲ್-ಜಾಸಿಮ್ ಸಾವನ್ನಪ್ಪಿದ್ದಾನೆ. ಈತ ಅನುಭವಿ ಭಯೋತ್ಪಾದಕ ನಾಯಕನಾಗಿದ್ದು, ಡಿಸೆಂಬರ್ 13, 2025ರಂದು ಸಾರ್ಜೆಂಟ್ ಎಡ್ಗರ್ ಬ್ರಿಯಾನ್ ಟೊರೆಸ್-ಟೋವರ್, ಸಾರ್ಜೆಂಟ್ ವಿಲಿಯಂ ನಥಾನಿಯಲ್ ಹೊವಾರ್ಡ್ ಮತ್ತು ಅಮೆರಿಕನ್ ನಾಗರಿಕ ಇಂಟರ್ಪ್ರಿಟರ್ ಅಯಾದ್ ಮನ್ಸೂರ್ ಸಕತ್ ಸಾವನ್ನಪ್ಪಿದ ಹೊಂಚುದಾಳಿಗೆ ನೇರವಾಗಿ ಸಂಪರ್ಕ ಹೊಂದಿದ್ದ ಎಂದು ತಿಳಿಸಲಾಗಿದೆ. CENTCOM ತನ್ನ ಪ್ರಕಟಣೆಯಲ್ಲಿ, ಬಿಲಾಲ್ ಹಸನ್ ಅಲ್-ಜಾಸಿಮ್ ದಾಳಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದನು ಮತ್ತು ಕಳೆದ ತಿಂಗಳು ಸಿರಿಯಾದ ಪಾಲ್ಮಿರಾ ಪ್ರದೇಶದಲ್ಲಿ ಅಮೆರಿಕನ್ ಹಾಗೂ ಸಿರಿಯನ್ ಸಿಬ್ಬಂದಿಯನ್ನು ಕೊಂದು ಗಾಯಗೊಳಿಸಿದ ಐಸಿಸ್ ಬಂದೂಕುಧಾರಿಯೊಂದಿಗೆ ನೇರ ಸಂಪರ್ಕದಲ್ಲಿದ್ದನೆಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ CENTCOM ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್, “ಮೂರು ಅಮೆರಿಕನ್ನರ ಸಾವಿಗೆ ಕಾರಣವಾದ ಭಯೋತ್ಪಾದಕ ಕಾರ್ಯಕರ್ತನ ಹತ್ಯೆ, ನಮ್ಮ ಪಡೆಗಳ ಮೇಲೆ ದಾಳಿ ನಡೆಸುವವರನ್ನು ನಾವು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಮೆರಿಕನ್ ನಾಗರಿಕರು ಮತ್ತು ಯೋಧರ ಮೇಲೆ ದಾಳಿ ನಡೆಸುವ, ಸಂಚು ರೂಪಿಸುವ ಅಥವಾ ಪ್ರೇರೇಪಿಸುವವರಿಗೆ ಯಾವುದೇ ಸುರಕ್ಷಿತ ಸ್ಥಳವಿಲ್ಲ. ನಾವು ನಿಮ್ಮನ್ನು ಹುಡುಕಿ ಹಿಡಿಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ದಾಳಿ, ಒಂದು ವರ್ಷದ ಹಿಂದೆ ಸಿರಿಯಾದ ಸರ್ವಾಧಿಕಾರಿ ನಾಯಕ ಬಶರ್ ಅಸ್ಸಾದ್ ಪದಚ್ಯುತಗೊಂಡ ನಂತರ ಮತ್ತೆ ಸಂಘಟಿಸಿಕೊಳ್ಳಲು ಯತ್ನಿಸುತ್ತಿರುವ ಐಸಿಸ್ ಗುಂಪುಗಳನ್ನು ಗುರಿಯಾಗಿಸಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ವ್ಯಾಪಕ ಯುಎಸ್ ಸೇನಾ ಕಾರ್ಯಾಚರಣೆಯ ಭಾಗವಾಗಿದೆ.
‘ಹಾಕೀ ಸ್ಟ್ರೈಕ್’ ಕಾರ್ಯಾಚರಣೆ : ‘ಹಾಕೀ ಸ್ಟ್ರೈಕ್’ ಎಂಬ ಹೆಸರಿನ ಈ ಕಾರ್ಯಾಚರಣೆಯಡಿ, ಅಮೆರಿಕ ಮತ್ತು ಅದರ ಪಾಲುದಾರರಾದ ಜೋರ್ಡಾನ್ ಹಾಗೂ ಸಿರಿಯಾ ಸೇರಿದಂತೆ ಹಲವು ರಾಷ್ಟ್ರಗಳು ಸೇರಿ 100 ಕ್ಕೂ ಹೆಚ್ಚು ಐಸಿಸ್ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಾಣಗಳನ್ನು ಗುರಿಯಾಗಿಸಿಕೊಂಡಿದ್ದು, 200 ಕ್ಕೂ ಹೆಚ್ಚು ನಿಖರ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ ಎಂದು CENTCOM ತಿಳಿಸಿದೆ. ಇದಲ್ಲದೆ, ಕಳೆದ ಒಂದು ವರ್ಷದಲ್ಲಿ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ಸಿರಿಯಾದಾದ್ಯಂತ 300 ಕ್ಕೂ ಹೆಚ್ಚು ಐಸಿಸ್ ಕಾರ್ಯಕರ್ತರನ್ನು ಬಂಧಿಸಿದ್ದು, 20 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿವೆ. ಇದರಿಂದ ಅಮೆರಿಕ ಮತ್ತು ಪ್ರಾದೇಶಿಕ ಭದ್ರತೆಗೆ ನೇರ ಬೆದರಿಕೆಯಾಗಿದ್ದ ಭಯೋತ್ಪಾದಕರನ್ನು ನಿಗ್ರಹಿಸಲಾಗಿದೆ ಎಂದು CENTCOM ಹೇಳಿದೆ.