ವಾಷಿಂಗ್ಟನ್, ಜ.18 (DaijiworldNews/TA): ಅಮೇರಿಕಾದ ದ್ವಿದಳ ಧಾನ್ಯಗಳ (ಪಲ್ಸ್ಗಳು) ಆಮದಿನ ಮೇಲೆ ಭಾರತ ವಿಧಿಸಿರುವ ಶೇ.30ರಷ್ಟು ಸುಂಕ ಅಮೇರಿಕಾದ ರೈತರಿಗೆ ಹೊಡೆತ ನೀಡುತ್ತಿದೆ ಎಂದು ಆರೋಪಿಸಿ, ಉತ್ತರ ಡಕೋಟಾ ಮತ್ತು ಮೊಂಟಾನಾ ರಾಜ್ಯಗಳ ಸೆನೆಟರ್ಗಳು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ.

ಭಾರತದೊಂದಿಗೆ ವ್ಯಾಪಾರ ಮಾತುಕತೆಗಳು ಮುಂದುವರಿದಿರುವ ಹಿನ್ನೆಲೆ, ಈ ಎರಡು ರಾಜ್ಯಗಳ ಶಾಸಕರು ಟ್ರಂಪ್ ಅವರಿಗೆ ಪತ್ರ ಬರೆದು, ಭಾರತ ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ವಿಧಿಸುತ್ತಿರುವ ಸುಂಕಗಳನ್ನು ಕಡಿಮೆ ಮಾಡಲು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸೆನೆಟರ್ಗಳ ಪತ್ರದಲ್ಲಿ, ಮೊಂಟಾನಾ ಮತ್ತು ಉತ್ತರ ಡಕೋಟಾ ದ್ವಿದಳ ಧಾನ್ಯಗಳ ಪ್ರಮುಖ ಉತ್ಪಾದಕ ರಾಜ್ಯಗಳು ಆಗಿದ್ದು, ಭಾರತವು ಜಗತ್ತಿನ ಒಟ್ಟು ದ್ವಿದಳ ಧಾನ್ಯ ಸೇವನೆಯಲ್ಲಿಯೂ ಸುಮಾರು ಶೇ.27ರಷ್ಟು ಅತಿದೊಡ್ಡ ಗ್ರಾಹಕ ದೇಶವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಮೆರಿಕದಿಂದ ರಫ್ತು ಆಗುವ ಹಳದಿ ಬಟಾಣಿ ಮೇಲೆ ಭಾರತ ಶೇ.30ರಷ್ಟು ಸುಂಕ ವಿಧಿಸಿದ್ದು, ಈ ಸುಂಕಗಳು ನವೆಂಬರ್ 2025ರಿಂದ ಜಾರಿಗೆ ಬಂದಿವೆ.
ಇದಕ್ಕೂ ಮೊದಲು, ಹಳದಿ ಬಟಾಣಿಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ರಫ್ತು ಮಾಡುವ ಅವಕಾಶ ಇತ್ತು. ಈ ವ್ಯವಸ್ಥೆ ಮಾರ್ಚ್ 2026ರವರೆಗೆ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಗ್ಗದ ಆಮದುಗಳಿಂದ ಸ್ಥಳೀಯ ಬೆಳೆಗಳ ಬೆಲೆ ಕುಸಿಯುತ್ತಿರುವುದನ್ನು ಉಲ್ಲೇಖಿಸಿ ಭಾರತೀಯ ರೈತರು ಸರ್ಕಾರದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ, ಮೋದಿ ಸರ್ಕಾರ ತನ್ನ ನೀತಿಯನ್ನು ಬದಲಿಸಿ ಅಮೆರಿಕದ ಆಮದು ದ್ವಿದಳ ಧಾನ್ಯಗಳ ಮೇಲೆ ಸುಂಕ ವಿಧಿಸಿದೆ. ಈ ಹಿನ್ನೆಲೆಯಲ್ಲಿ, ದ್ವಿದಳ ಧಾನ್ಯಗಳ ಸುಂಕದ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸುವಂತೆ ಸೆನೆಟರ್ಗಳು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. ಇದರಿಂದ ಅಮೆರಿಕದ ಉತ್ಪಾದಕರು ಮತ್ತು ಭಾರತೀಯ ಗ್ರಾಹಕರು ಇಬ್ಬರಿಗೂ ಲಾಭವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮನವಿ, ಅಮೆರಿಕವು ಇತ್ತೀಚೆಗೆ ಭಾರತದಿಂದ ಆಮದು ಆಗುವ ಕೆಲವು ವಸ್ತುಗಳ ಮೇಲೆ ಶೇ.50ರಷ್ಟು ಸುಂಕ ಜಾರಿ ಮಾಡಿರುವ ಸಮಯದಲ್ಲಿನ ವಿಚಾರವಾಗಿರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಟ್ರಂಪ್ ಅಧ್ಯಕ್ಷತ್ವದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗಿತ್ತು. ಬಳಿಕ, ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದನ್ನು ಆಕ್ಷೇಪಿಸಿ ಇನ್ನಷ್ಟು ಶೇ.25ರಷ್ಟು ದಂಡಾತ್ಮಕ ಸುಂಕ ವಿಧಿಸಲಾಯಿತು. ಇದರ ಪರಿಣಾಮವಾಗಿ, ಭಾರತದ ಕೆಲವು ವಸ್ತುಗಳ ಮೇಲೆ ಈಗ ಒಟ್ಟು ಶೇ.50ರಷ್ಟು ಸುಂಕ ಜಾರಿಯಲ್ಲಿದೆ.