ವಾಷಿಂಗ್ಟನ್, ಜ. 17 (DaijiworldNews/TA): ಗ್ರೀನ್ಲ್ಯಾಂಡ್ನ್ನು ಅಮೇರಿಕಾದ ವಶಕ್ಕೆ ಪಡೆಯುವ ತನ್ನ ಯೋಜನೆಗೆ ಬೆಂಬಲ ನೀಡದ ರಾಷ್ಟ್ರಗಳ ಮೇಲೆ ವ್ಯಾಪಾರ ಸುಂಕಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಗ್ರೀನ್ಲ್ಯಾಂಡ್ ಅಮೇರಿಕಾದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಅಗತ್ಯ ಎಂದು ಟ್ರಂಪ್ ಹೇಳಿದ್ದು, ಈ ನಿರ್ಧಾರವನ್ನು ಒಪ್ಪದ ದೇಶಗಳ ವಿರುದ್ಧ ಆರ್ಥಿಕ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುರೋಪ್ ರಾಷ್ಟ್ರಗಳಿಗೆ ಟ್ರಂಪ್ ಗಟ್ಟಿಯಾದ ಸಂದೇಶ ರವಾನಿಸಿದ್ದಾರೆ. ಇದಕ್ಕೂ ಮುನ್ನ ಗ್ರೀನ್ಲ್ಯಾಂಡ್ನ್ನು ಮಿಲಿಟರಿ ಬಲ ಪ್ರಯೋಗದ ಮೂಲಕವೂ ವಶಪಡಿಸಿಕೊಳ್ಳಬಹುದು ಎಂದು ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಡೆನ್ಮಾರ್ಕ್ ತನ್ನ ನಿಯಂತ್ರಣದಲ್ಲಿರುವ ಗ್ರೀನ್ಲ್ಯಾಂಡ್ಗೆ ಸೇನಾ ಪಡೆಗಳನ್ನು ಕಳುಹಿಸಿದೆ.
ರಷ್ಯಾ ಮತ್ತು ಚೀನಾದಂತಹ ಶಕ್ತಿಶಾಲಿ ರಾಷ್ಟ್ರಗಳ ಎದುರು ಡೆನ್ಮಾರ್ಕ್ ಗ್ರೀನ್ಲ್ಯಾಂಡ್ಗೆ ಸಮರ್ಪಕ ಭದ್ರತೆ ನೀಡಲು ಸಾಧ್ಯವಿಲ್ಲ. ಅಮೇರಿಕಾದಿಂದ ಮಾತ್ರ ಗ್ರೀನ್ಲ್ಯಾಂಡ್ಗೆ ಭದ್ರತೆ ಸಿಗಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಗಮನಾರ್ಹವಾಗಿ, ಅಮೇರಿಕಾದ ನೇತೃತ್ವದ ನ್ಯಾಟೋ ಸೇನಾ ಒಕ್ಕೂಟದಲ್ಲಿ ಡೆನ್ಮಾರ್ಕ್ ಸೇರಿದಂತೆ ಯುರೋಪ್ನ 23 ರಾಷ್ಟ್ರಗಳು ಸದಸ್ಯರಾಗಿವೆ. ಆದರೆ ಗ್ರೀನ್ಲ್ಯಾಂಡ್ ವಿಷಯದಲ್ಲಿ ಅಮೇರಿಕಾದ ನಿಲುವಿಗೆ ಯುರೋಪ್ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಬೆಳವಣಿಗೆಗಳು ಅಮೇರಿಕಾ - ಯುರೋಪ್ ಸಂಬಂಧಗಳಲ್ಲಿ ಹೊಸ ತಣಿವು ಸೃಷ್ಟಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.