ವಾಷಿಂಗ್ಟನ್, ಜ. 15 (DaijiworldNews/AA): ಭಾರತೀಯ ಆಹಾರ ತಿನ್ನುವ ವಿಚಾರವಾಗಿ ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯದ ಇಬ್ಬರು ಭಾರತೀಯ ಪಿಹೆಚ್ಡಿ ವಿದ್ಯಾರ್ಥಿಗಳು ತಾರತಮ್ಯ ಎದುರಿಸಿದ್ದು, ಇದೀಗ ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ $200,000 (ಅಂದಾಜು 1.8 ಕೋಟಿ) ಮೌಲ್ಯದ ಪರಿಹಾರವನ್ನು ಪಡೆದುಕೊಂಡಿದ್ದಾರೆ.

ಈ ಘಟನೆ 2023 ರಲ್ಲಿ ನಡೆದಿತ್ತು. ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದಲ್ಲಿ ಪಿಹೆಚ್ಡಿ ಪಡೆಯುತ್ತಿದ್ದರು. ಸೆಪ್ಟೆಂಬರ್ 5, 2023 ರಂದು ವಿಶ್ವವಿದ್ಯಾನಿಲಯಕ್ಕೆ ಸೇರಿದ ಸುಮಾರು ಒಂದು ವರ್ಷದ ನಂತರ, ಪ್ರಕಾಶ್ ಅವರು ಡಿಪಾರ್ಟ್ಮೆಂಟ್ನಲ್ಲಿ ಮೈಕ್ರೋವೇವ್ನಲ್ಲಿ ಪಾಲಕ್ ಪನೀರ್ ಬಿಸಿಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಮಹಿಳಾ ಸಿಬ್ಬಂದಿಯೊಬ್ಬರು, ವಾಸನೆ ಬಗ್ಗೆ ದೂರು ನೀಡಿದ್ದು, ಆಹಾರವನ್ನು ಬಿಸಿಮಾಡಲು ಮೈಕ್ರೋವೇವ್ ಅನ್ನು ಬಳಸಬೇಡಿ ಎಂದು ಪ್ರಕಾಶ್ ಗೆ ಹೇಳಿದ್ದರು.
ತುಂಬಾ ವಾಸನೆ ಬರುತಿತ್ತು ಎಂದು ಆ ಮಹಿಳಾ ಸಿಬ್ಬಂದಿ ಹೇಳಿದ್ದಾಳೆ. ಆಗ 'ಇದು ಸಾಮಾನ್ಯ ಸ್ಥಳವಾಗಿದ್ದು, ಅದನ್ನು ಬಳಸಿಕೊಳ್ಳುವ ಹಕ್ಕಿದೆ. ನನ್ನ ಆಹಾರ ನನ್ನ ಹೆಮ್ಮೆ. ಒಳ್ಳೆಯ ಅಥವಾ ಕೆಟ್ಟ ವಾಸನೆಯ ಬಗ್ಗೆ ಕಲ್ಪನೆಗಳು ಸಾಂಸ್ಕೃತಿಕವಾಗಿ ನಿರ್ಧರಿಸಲ್ಪಡುತ್ತವೆ' ಎಂದು ಪ್ರಕಾಶ್ ವಾದಿಸಿದ್ದರು. ಈ ವೇಳೆ ಅಲ್ಲಿನ ಮತ್ತೊಂದು ಸಿಬ್ಬಂದಿಯೊಬ್ಬರು 'ಹೆಚ್ಚಿನ ವಾಸನೆಯಿಂದಾಗಿ ಬ್ರೊಕೊಲಿಯನ್ನು ಬಿಸಿಮಾಡುವುದನ್ನು ಸಹ ನಿಷೇಧಿಸಲಾಗಿದೆ' ಎಂದು ಹೇಳಿದ್ದಾರೆ.
ಬಳಿಕ ಸಿಬ್ಬಂದಿಗಳು ಹಾಗೂ ಪ್ರಕಾಶ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಕಾಶ್ ಅವರ ಪಾರ್ಟರ್ ಉರ್ಮಿ ಭಟ್ಟಾಚಾರ್ಯ ಅವರ ಬೆಂಬಲಕ್ಕೆ ನಿಂತಿದ್ದು, ಕಿಚನ್ ವಿಚಾರದಲ್ಲಿ ಬಲವಾಗಿ ನಿಂತಿದ್ದಕ್ಕಾಗಿ ತಮ್ಮನ್ನು ತಾರತಮ್ಯಕ್ಕೆ ಒಳಪಡಿಸಲಾಗಿದೆ ಎಂದು ದಂಪತಿಗಳು ಆರೋಪಿಸಿದ್ದಾರೆ. ಸಿಬ್ಬಂದಿಗೆ ಅಸುರಕ್ಷಿತ ಆರೋಪದ ಮೇಲೆ ಹಿರಿಯ ಅಧ್ಯಾಪಕರೊಂದಿಗೆ ಪದೇ ಪದೇ ಸಭೆ ನಡೆಸಲಾಗಿತ್ತು ಎಂದು ಪ್ರಕಾಶ್ ತಿಳಿಸಿದ್ದಾರೆ.
ಪ್ರಕಾಶ್ ಅವರನ್ನು ಬೆಂಬಲಿಸಿದ್ದಕ್ಕಾಗಿ ವಿವರಣೆ ನೀಡದೆ ಬೋಧಕ ಸಹಾಯಕ ಸ್ಥಾನದಿಂದ ಉರ್ಮಿ ಭಟ್ಟಾಚಾರ್ಯ ಅವರನ್ನು ವಜಾಗೊಳಿಸಲಾಗಿತ್ತು. ಪಿಹೆಚ್ಡಿ ಗೆ ಹೋಗುವ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಗಳನ್ನು ನೀಡಲು ಇಲಾಖೆ ನಿರಾಕರಿಸಿತ್ತು. ಹೀಗಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇವು ಎಂದು ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಕಿಚನ್ ವಿವಾದದ ನಂತರ ಪಿಹೆಚ್ಡಿ ಮಾಡ ಬಯಸುವ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಗಳನ್ನು ತಡೆಹಿಡಿಯಲಾಗಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡಲಾಗುತ್ತಿದೆ ಎಂದು ಪ್ರಕಾಶ್ ಹಾಗೂ ಭಟ್ಟಾಚಾರ್ಯ ಅವರು ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಫಾರ್ ಕೊಲೊರಾಡೊದಲ್ಲಿ ಮೊಕದ್ದಮೆ ಹೂಡಿದ್ದರು.
ಅವರ ಸಾಂಸ್ಕೃತಿಕ ಆಹಾರಕ್ಕೆ ವಿಶ್ವವಿದ್ಯಾನಿಲಯದ ಪ್ರತಿಕ್ರಿಯೆಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ "ವ್ಯವಸ್ಥಿತ ಪಕ್ಷಪಾತ"ದ ಅಭಿವ್ಯಕ್ತಿಯಾಗಿದೆ ಎಂದು ವಾದಿಸಿದ್ದರು. ಸೆಪ್ಟೆಂಬರ್ 2025 ರಲ್ಲಿ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯ ಪ್ರಕಾಶ್ ಮತ್ತು ಭಟ್ಟಾಚಾರ್ಯ ಅವರಿಗೆ $200,000 ಪಾವತಿಸಿ, ಪ್ರಕರಣವನ್ನು ಇತ್ಯರ್ಥಪಡಿಸಿ, ಅವರಿಗೆ ಮಾಸ್ಟರ್ ಡಿಗ್ರಿ ನೀಡಿತ್ತು. ಆದರೆ ಇವರಿಬ್ಬರನ್ನು ವಿಶ್ವವಿದ್ಯಾನಿಲಯದಲ್ಲಿ ಮುಂದಿನ ದಾಖಲಾತಿ ಅಥವಾ ಉದ್ಯೋಗಕ್ಕೆ ನಿರ್ಬಂಧ ಹೇರಲಾಗಿದೆ.
ಇತ್ತೀಚೆಗೆ ಈ ಘಟನೆ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಉರ್ಮಿ ಭಟ್ಟಚಾರ್ಯ ಅವರು ವಿಶ್ವವಿದ್ಯಾಲಯದ ವಿರುದ್ಧ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿರುವುದಾಗಿ ತಿಳಿಸಿದ್ದಾರೆ. 'ಈ ವರ್ಷ ನನಗೆ ಬೇಕಾದುದನ್ನು ತಿನ್ನುವ ಮತ್ತು ಇಚ್ಛೆಯಂತೆ ಪ್ರತಿಭಟಿಸುವ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇನೆ. ನನ್ನ ಚರ್ಮದ ಬಣ್ಣ, ಜನಾಂಗೀಯ ವಿಚಾರಕ್ಕೆ ಅಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಆಹಾರ ವಿಚಾರದಲ್ಲಿ ಈ ರೀತಿ ತಾರತಮ್ಯ ಮಾಡುವವರಿಗೆ ಇದೇ ರೀತಿಯ ಕ್ರಮ ಕೈಗೊಳ್ಳಬೇಕು. ಅನ್ಯಾಯಗಳಿಗೆ ಸುಮ್ಮನೆ ಕೂರಬಾರದು. ಉದ್ದೇಶಪೂರ್ವಕವಾಗಿ ಕೆಣಕುವವರ ವಿರುದ್ಧ ಮೌನವಾಗಿರುವುದಿಲ್ಲ' ಎಂದು ಪೋಸ್ಟ್ ಮಾಡಿದ್ದಾರೆ.