ವಾಷಿಂಗ್ಟನ್, ಜ. 13 (DaijiworldNews/TA): ದಂಗೆ ಪೀಡಿತ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಲು ಸಿದ್ಧವಾಗಿದೆ ಎಂಬ ವದಂತಿಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಇರಾನ್ ನಾಯಕರು ನನಗೆ ಕರೆ ಮಾಡಿದ್ದರು. ಅವರು ನನ್ನೊಂದಿಗೆ ಮಾತುಕತೆ ನಡೆಸಲು ಮನವಿ ಮಾಡಿದ್ದಾರೆ. ಸಭೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಮಾತುಕತೆ ಆರಂಭಕ್ಕೂ ಮೊದಲು ನಾವು ಕಾರ್ಯನಿರ್ವಹಿಸಬೇಕಾಗಬಹುದು’ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಆ ‘ಕಾರ್ಯ’ ಏನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಭಾನುವಾರವಷ್ಟೇ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ‘ಇರಾನ್ ಹಿಂದೆಂದಿಗಿಂತಲೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಅಮೆರಿಕ ನೆರವು ನೀಡಲು ಸಿದ್ಧವಿದೆ’ ಎಂದು ಬರೆದುಕೊಂಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ನಾಯಕರಿಂದ ಬಂದ ಕರೆ ಬಗ್ಗೆ ಬಹಿರಂಗಪಡಿಸಿದ್ದು, ಈ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
ಇರಾನ್ನೊಳಗಿನ ಪರಿಸ್ಥಿತಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, ‘ಇರಾನ್ನಲ್ಲಿ ಅಮಾಯಕರನ್ನು ಕೊಲ್ಲಲಾಗಿದೆ ಎಂದು ತೋರುತ್ತದೆ. ಅವರನ್ನು ಕೊಲ್ಲಬಾರದಿತ್ತು. ಕಾಲ್ತುಳಿತದಲ್ಲಿ ಹಲವು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಅಲ್ಲಿ ಬಹಳಷ್ಟು ಜನ ಶೋಷಿತರಾಗಿದ್ದಾರೆ. ನೀವು ಅವರನ್ನು ನಾಯಕರು ಎಂದು ಕರೆಯಬಹುದು, ಆದರೆ ಅವರು ನಾಯಕರಲ್ಲ, ಕ್ರೂರಿಗಳು. ಅವರು ನಾಯಕತ್ವದ ಹೆಸರಿನಲ್ಲಿ ಹಿಂಸಾಚಾರದಿಂದ ಆಳುತ್ತಿದ್ದಾರೆ’ ಎಂದು ಕಿಡಿಕಾರಿದರು.
ಈ ವಿಚಾರವನ್ನು ಅಮೆರಿಕ ಗಂಭೀರವಾಗಿ ಗಮನಿಸುತ್ತಿದೆ ಎಂದು ಹೇಳಿದ ಟ್ರಂಪ್, ‘ನಮ್ಮ ಸೈನ್ಯವೂ ಈ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ. ನಮ್ಮ ಮುಂದೆ ಹಲವು ಬಲವಾದ ಆಯ್ಕೆಗಳು ಇವೆ. ಸರಿಯಾದ ಸಮಯದಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಇರಾನ್ ಅಥವಾ ಅದರ ಮಿತ್ರರು ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಟ್ರಂಪ್ ಕಠಿಣ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ‘ಅವರು ಹಾಗೆ ಮಾಡಿದರೆ, ನಾವು ಹಿಂದೆಂದೂ ಹೊಡೆದಿಲ್ಲದ ರೀತಿಯಲ್ಲಿ ಹೊಡೆಯುತ್ತೇವೆ. ಅವರು ಅದನ್ನು ಕಲ್ಪಿಸಲೂ ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು. ಜೊತೆಗೆ, ಅಮೆರಿಕದ ನಿಲುವನ್ನು ಇರಾನ್ ಈಗಾಗಲೇ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.
ಸುಲೈಮಾನಿ ಮತ್ತು ಅಲ್-ಬಾಗ್ದಾದಿ ಹತ್ಯೆಗಳನ್ನು ನೆನಪಿಸಿದ ಟ್ರಂಪ್, ‘ಅವರ ಹತ್ಯೆಗಳ ನಂತರ ಇರಾನ್ನ ಪರಮಾಣು ಬೆದರಿಕೆ ನಿಂತುಹೋಯಿತು. ಆದರೂ ಅವರು ನಮ್ಮ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಹೇಳಿದರು. ಈ ಮೂಲಕ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಪರೋಕ್ಷ ಎಚ್ಚರಿಕೆ ನೀಡಿದಂತಾಯಿತು.
ಒಟ್ಟಾರೆ, ಇರಾನ್ನೊಳಗಿನ ಹಿಂಸಾತ್ಮಕ ಪ್ರತಿಭಟನೆಗಳು, ಅಮೆರಿಕದ ಕಠಿಣ ನಿಲುವು ಮತ್ತು ಟ್ರಂಪ್ ಅವರ ಈ ಸ್ಫೋಟಕ ಹೇಳಿಕೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷದ ಆತಂಕವನ್ನು ಹೆಚ್ಚಿಸುತ್ತಿವೆ.