ಇಸ್ಲಾಮಾಬಾದ್, ಜ. 11 (DaijiworldNews/AA): ಭಾರತಕ್ಕೆ ನನ್ನನ್ನು ಕಂಡರೆ ಭಯ, ಪಾಕ್ ಸೇನೆಯಿಂದ ನನಗೆ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತದೆ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ ಹೇಳಿದ್ದಾನೆ.

ಪಾಕಿಸ್ತಾನದ ಶಾಲೆಯೊಂದರ ಸಮಾರಂಭದಲ್ಲಿ ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಆತ, "ನನ್ನ ಉಪಸ್ಥಿತಿಯಿಂದಾಗಿ ಭಾರತ ಭಯಭೀತವಾಗಿದೆ. ಪಾಕಿಸ್ತಾನ ಸೇನೆಯ ಕಾರ್ಯಕ್ರಮಗಳಿಗೆ ನನಗೆ ಆಹ್ವಾನಗಳು ಬರುತ್ತಿವೆ. ಸೈನಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗುತ್ತಿದೆ" ಎಂದು ಹೇಳಿಕೆ ನೀಡುವ ಮೂಲಕ ಲಷ್ಕರ್-ಎ-ತೈಬಾದ ಪಾಕ್ ಸೇನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಒಪ್ಪಿಕೊಂಡಿದ್ದಾನೆ.
"ಭಾರತ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವ ಮೂಲಕ ಭಾರತ ತಪ್ಪು ಮಾಡಿದೆ. ಕಾಶ್ಮೀರ ಕಾರ್ಯಾಚರಣೆಯಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ" ಎಂದು ತಿಳಿಸಿದ್ದಾನೆ.
ಸದ್ಯ ಆತ ಸಭೆಯನ್ನುದ್ದೇಶಿಸಿ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡುವ ಪಾಕಿಸ್ತಾನದ ಸುಳ್ಳಿನ ಮುಖವಾಡ ಕಳಚಿದಂತಾಗಿದೆ.