ದುಬೈ, ಜ. 07 (DaijiworldNews/TA): ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್ನಲ್ಲಿ ಕೆಲವು ಸಮಯ ಕಳೆದ ಕೇರಳ ಮೂಲದ ಕುಟುಂಬವು ದುಬೈಗೆ ಹಿಂತಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪುಟ್ಟ ಮಕ್ಕಳ ದುರ್ಮರಣ ಸಂಭವಿಸಿದ್ದು, ಪೋಷಕರು ಮತ್ತು ಸೋದರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರು ಎಲ್ಲರೂ 14 ವರ್ಷದೊಳಗಿನ ಮಕ್ಕಳು, ಮತ್ತು ಒಂದೇ ಕುಟುಂಬದವರು. ಮೃತ ಮಕ್ಕಳನ್ನು ಅಶಾಝ್ (14 ವರ್ಷ), ಅಮರ್ (12 ವರ್ಷ), ಅಜಾಮ್ (7 ವರ್ಷ) ಮತ್ತು ಅಯ್ಯಾಶ್ (5 ವರ್ಷ) ಎಂದು ಗುರುತಿಸಲಾಗಿದೆ. ಮನೆ ಕೆಲಸದಾಕೆ ಬುಶ್ರಾ ಫಯಾಜ್ ಯಾಹು ಕೂಡ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಜಾಮ್ ಅವರು ಅಪಘಾತದ ಬಳಿಕ ಮೃತಪಟ್ಟರು.
ಮಕ್ಕಳ ಪೋಷಕರು ಅಬ್ದುಲ್ ಲತೀಫ್ ಮತ್ತು ರುಕ್ಸಾನಾ, ಮತ್ತು ಅವರ 10 ವರ್ಷದ ಪುತ್ರಿ ಇಜ್ಜಾ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ದುಬೈನಲ್ಲಿ ಪೋಷಕರು ಮತ್ತು ಸಂಬಂಧಿಕರು ಮಕ್ಕಳ ಅಂತ್ಯಕ್ರಿಯೆಯನ್ನು ಮಾಡಿ ಪುಟ್ಟ ಮಕ್ಕಳಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ. ಮುಹೈಸ್ನಾದ ಅಲ್ ಕುಸೈಸ್ ಸ್ಮಶಾನದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.
ಅಬ್ದುಲ್ ಲತೀಫ್ ಉದ್ಯಮಿಯಾಗಿದ್ದು, ರಾಸ್ ಅಲ್ ಖೈಮಾದಲ್ಲಿ ವ್ಯವಹಾರ ನಡೆಸುತ್ತಿದ್ದರೆ, ರುಕ್ಸಾನಾ ರಿಯಲ್ ಎಸ್ಟೇಟ್ ಸಲಹೆಗಾರರಾಗಿದ್ದರು. ಕುಟುಂಬವು ಚಳಿಗಾಲದ ರಜೆಯಲ್ಲಿ ಲಿವಾ ಉತ್ಸವದಲ್ಲಿ ಸಮಯ ಕಳೆಯಲು ಅಬುಧಾಬಿಗೆ ತೆರಳಿತ್ತು. ಮಕ್ಕಳ ಶಾಲೆ ಪುನರಾರಂಭಕ್ಕೂ ಮುನ್ನ ದುಬೈಗೆ ಹಿಂತಿರುಗುವ ವೇಳೆ ಈ ತೀವ್ರ ಅಪಘಾತ ಸಂಭವಿಸಿದೆ.