ಜಪಾನ್, ಜ. 07 (DaijiworldNews/TA): ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಶ್ರದ್ಧಾಂಜಲಿ ಸಲ್ಲಿಸುವುದು, ಮೌನಾಚರಣೆ ಮಾಡುವುದು ಎಲ್ಲೆಡೆ ಕಂಡುಬರುವ ಸಂಗತಿ. ಕೆಲವೊಮ್ಮೆ ತಾವು ಪ್ರೀತಿಯಿಂದ ಸಾಕಿದ ಪ್ರಾಣಿಗಳ ಸಾವಿನಲ್ಲೂ ಜನರು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಆದರೆ ಕೀಟಗಳು ಸತ್ತರೆ ಅವುಗಳಿಗಾಗಿ ಮೌನಾಚರಣೆ ಅಥವಾ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಚ್ಚರಿಯ ಸಂಗತಿಯೆಂದರೆ, ಜಪಾನಿನಲ್ಲಿ ಒಂದು ಕಂಪನಿ ಕಳೆದ ನಾಲ್ಕು ದಶಕಗಳಿಂದ ಇದೇ ಕೆಲಸವನ್ನು ಮಾಡುತ್ತಾ ಬಂದಿದೆ.

ಜಪಾನ್ನ ಖ್ಯಾತ ಗೃಹ ಕೀಟನಾಶಕ ಕಂಪನಿಯಾಗಿರುವ ಅರ್ಥ್ ಕಾರ್ಪೊರೇಷನ್ ಪ್ರತಿವರ್ಷ ತನ್ನ ಸಂಶೋಧನೆಯ ವೇಳೆ ಸಾವನ್ನಪ್ಪಿದ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಕಳೆದ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಆಚರಣೆ ಇದೀಗ ಜಗತ್ತಿನ ಗಮನ ಸೆಳೆಯುತ್ತಿದೆ.
ಅರ್ಥ್ ಕಾರ್ಪೊರೇಷನ್ ದಶಕಗಳ ಸಂಶೋಧನೆಯ ಮೂಲಕ ಜಪಾನ್ನ ಅತ್ಯುತ್ತಮ ಕೀಟನಾಶಕ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಕಂಪನಿಯು ಅಕೋ ನಗರದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ವಿವಿಧ ಕೀಟ ಪ್ರಭೇದಗಳನ್ನು ಬಳಸುತ್ತದೆ. ಈ ಸಂಶೋಧನಾ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಹಲವು ಕೀಟಗಳು ಸಾವನ್ನಪ್ಪುತ್ತವೆ.
ಆದರೆ ಈ ಸಾವುಗಳನ್ನು ಕಂಪನಿ ಎಂದಿಗೂ ಹಗುರವಾಗಿ ಪರಿಗಣಿಸುವುದಿಲ್ಲ. ಸಂಶೋಧನೆಗಾಗಿ ತಮ್ಮ ಜೀವ ತ್ಯಾಗ ಮಾಡಿದ ಕೀಟಗಳಿಗೆ ಗೌರವ ಸೂಚಿಸುವ ಉದ್ದೇಶದಿಂದ, ಅಕೋ ನಗರದ ಮೈಯೋಡೋಜಿ ದೇವಾಲಯದಲ್ಲಿ ಸ್ಮರಣಾರ್ಥ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ತಿಂಗಳು ನಡೆದ ಈ ಸಮಾರಂಭದಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ಸದಸ್ಯರು ಭಾಗವಹಿಸಿದ್ದರು.
ಈ ವೇಳೆ ಸೊಳ್ಳೆಗಳು, ನೊಣಗಳು, ಜಿರಳೆಗಳು ಸೇರಿದಂತೆ ವಿವಿಧ ಕೀಟಗಳ ಚಿತ್ರಗಳನ್ನು ಪೂಜಾ ಸ್ಥಳದಲ್ಲಿ ಇರಿಸಲಾಗುತ್ತದೆ. ಸಿಬ್ಬಂದಿ ಸದಸ್ಯರು ಅವುಗಳ ಮುಂದೆ ಮೌನಾಚರಣೆ ನಡೆಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದೃಶ್ಯಗಳು ನೋಡುವವರಿಗೆ ಅಚ್ಚರಿ ಮೂಡಿಸುವಂತೆಯೇ ಮಾನವೀಯತೆಯನ್ನೂ ತೋರಿಸುತ್ತವೆ.
ಅರ್ಥ್ ಕಾರ್ಪೊರೇಷನ್ನ ಸಂಶೋಧನಾ ತಂಡ ಇದುವರೆಗೆ ಸುಮಾರು 10 ಲಕ್ಷ ಜಿರಳೆಗಳು ಮತ್ತು 100 ಮಿಲಿಯನ್ಗಿಂತಲೂ ಹೆಚ್ಚು ಕೀಟಗಳನ್ನು ಸಂಶೋಧನೆಗಾಗಿ ಬಳಸಿಕೊಂಡಿದೆ ಎಂದು ಹೇಳಲಾಗುತ್ತದೆ. ಮಾನವನ ಆರೋಗ್ಯ ಮತ್ತು ಸುರಕ್ಷತೆಗಾಗಿ ಈ ಕೀಟಗಳು ತಮ್ಮ ಜೀವವನ್ನೇ ಬಲಿಕೊಟ್ಟಿವೆ ಎಂಬ ಭಾವನೆಯಿಂದ ಕಂಪನಿ ಈ ಗೌರವ ಸಮರ್ಪಣೆಯನ್ನು ಮಾಡುತ್ತದೆ.
ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ನಡೆಯುತ್ತಿರುವ ಈ ವಿಶಿಷ್ಟ ಕಾರ್ಯಕ್ರಮ, ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳು ಒಟ್ಟಿಗೆ ಸಾಗಬಹುದೆಂಬುದಕ್ಕೆ ಅರ್ಥ್ ಕಾರ್ಪೊರೇಷನ್ ನೀಡುತ್ತಿರುವ ಅಪರೂಪದ ಉದಾಹರಣೆಯಾಗಿದೆ.