ವೆನೆಜುವೆಲಾ, ಜ. 06 (DaijiworldNews/TA): ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಅಮೆರಿಕದಲ್ಲಿ ನ್ಯಾಯಾಲಯಕ್ಕೆ ಹಾಜರಾದ ತಕ್ಷಣವೇ ವೆನೆಜುವೆಲಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ದೇಶದ ಉಪಾಧ್ಯಕ್ಷೆ ಹಾಗೂ ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಅವರು ಸೋಮವಾರ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇತ್ತ ಅಮೆರಿಕದ ನ್ಯೂಯಾರ್ಕ್ನಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ನಿಕೋಲಸ್ ಮಡುರೊ ನ್ಯಾಯಾಲಯಕ್ಕೆ ಹಾಜರಾದರೆ, ಅತ್ತ ಕಾರಕಾಸ್ನಲ್ಲಿ ಡೆಲ್ಸಿ ರೊಡ್ರಿಗಸ್ ಅಧಿಕಾರ ಸ್ವೀಕರಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ಅವರು ಭಾವನಾತ್ಮಕ ಹಾಗೂ ಆಕ್ರಮಣಕಾರಿ ಭಾಷಣ ಮಾಡಿ, ನಿಕೋಲಸ್ ಮಡುರೊ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದಾಗಿ ಹೇಳಿದರು. ವೆನೆಜುವೆಲಾದ ಜನರು ಅನುಭವಿಸಿದ ನೋವು ಮತ್ತು ಸಂಕಷ್ಟಗಳನ್ನು ತಾವು ನೇರವಾಗಿ ಅನುಭವಿಸುತ್ತಿರುವುದಾಗಿ ಅವರು ತಿಳಿಸಿದರು.
“ನಮ್ಮ ತಾಯ್ನಾಡಿನ ವಿರುದ್ಧ ನಡೆದ ಅಕ್ರಮ ಮಿಲಿಟರಿ ಆಕ್ರಮಣದ ನಂತರ ವೆನೆಜುವೆಲಾದ ಜನರು ಅನುಭವಿಸಿದ ನೋವಿನೊಂದಿಗೆ ನಾನು ಇಲ್ಲಿ ನಿಂತಿದ್ದೇನೆ” ಎಂದು ಡೆಲ್ಸಿ ರೊಡ್ರಿಗಸ್ ಹೇಳಿದರು. ಜೊತೆಗೆ, ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಒತ್ತೆಯಾಳಾಗಿರಿಸಲ್ಪಟ್ಟ ನಮ್ಮ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಅವರ ಅಪಹರಣಕ್ಕೆ ಸಂಬಂಧಿಸಿದ ನೋವೂ ನನ್ನೊಂದಿಗಿದೆ ಎಂದು ಅವರು ಹೇಳಿದರು.
ಎಲ್ಲಾ ವೆನೆಜುವೆಲಾದ ನಾಗರಿಕರ ಪರವಾಗಿ ಗೌರವ ಮತ್ತು ಜವಾಬ್ದಾರಿಯೊಂದಿಗೆ ಈ ಪ್ರಮಾಣವಚನವನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದ ಡೆಲ್ಸಿ ರೊಡ್ರಿಗಸ್, ದೇಶದ ಸ್ವಾತಂತ್ರ್ಯ ಹೋರಾಟಗಾರ ಸೈಮನ್ ಬೊಲಿವರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
56 ವರ್ಷದ ಡೆಲ್ಸಿ ರೊಡ್ರಿಗಸ್ ವೃತ್ತಿಯಿಂದ ಕಾರ್ಮಿಕ ವಕೀಲರಾಗಿದ್ದು, ಆಡಳಿತ ಪಕ್ಷದ ಮೇಲೆ ಗಾಢ ನಿಷ್ಠೆ ಹೊಂದಿರುವ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ನಿಕೋಲಸ್ ಮಡುರೊ ಅವರ ಖಾಸಗಿ ವಲಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ವರದಿಗಳೂ ಇದೆ. ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾಗಿರುವ ಅವರ ಸಹೋದರ ಜಾರ್ಜ್ ರೊಡ್ರಿಗಸ್ ಅವರು ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಒಟ್ಟು 283 ಸಂಸದರು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ವಿರೋಧ ಪಕ್ಷಕ್ಕೆ ಸೇರಿದವರು ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಮಚಾದೊ ನೇತೃತ್ವದ ಪ್ರಮುಖ ವಿರೋಧ ಪಕ್ಷ ಬಣ ಸೇರಿದಂತೆ ದೊಡ್ಡ ಪ್ರಮಾಣದ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು.
ಪ್ರಮಾಣವಚನ ಸಮಾರಂಭಕ್ಕೆ ಕೇವಲ ಒಬ್ಬ ಶಾಸಕರು ಮಾತ್ರ ಗೈರುಹಾಜರಾಗಿದ್ದರು. ಅವರು ಅಮೆರಿಕದ ಬಂಧನದಲ್ಲಿರುವ ವೆನೆಜುವೆಲಾದ ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಆಗಿದ್ದಾರೆ.