ಕ್ಯಾರಕಾಸ್, ಜ.03 (DaijiworldNews/ AK): ವೆನೆಜುವೆಲಾದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಶನಿವಾರ ನಸುಕಿನ ಜಾವ ವೆನೆಜುವೆಲಾ ಕಾಲಮಾನ 2 ಗಂಟೆಯ ವೇಳೆಗೆ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕದ ವಾಯುಸೇನೆ ಏರ್ಸ್ಟ್ರೈಕ್ ಮಾಡಿದೆ.

ಈ ದಾಳಿಯನ್ನು ಅಮೆರಿಕ ಖಚಿತಪಡಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದೊಳಗಿನ ಮಿಲಿಟರಿ ಸೌಲಭ್ಯಗಳು ಸೇರಿದಂತೆ ಸ್ಥಳಗಳ ಮೇಲೆ ದಾಳಿ ಮಾಡಲು ಆದೇಶಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕನಿಷ್ಠ 7 ದೊಡ್ಡ ಸ್ಫೋಟಗಳು ಸಂಭವಿಸಿದ್ದು ರಾಜಧಾನಿಯಲ್ಲಿ ಈಗ ವಿದ್ಯುತ್ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ಈ ದಾಳಿ ನಡೆಸಿದೆ. ನಗರದ ದಕ್ಷಿಣ ಭಾಗದಲ್ಲಿ ಪ್ರಮುಖ ಮಿಲಿಟರಿ ನೆಲೆಯ ಬಳಿಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಸ್ಫೋಟಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಜ್ಞಾತ ಸ್ಥಳದ ಮೇಲೆ ಹೆಲಿಕಾಪ್ಟರ್ ಮೂಲಕ ರಾಕೆಟ್ ದಾಳಿ ನಡೆದಿದೆ.
ವೆನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆದಿದೆ. ರಾಜಧಾನಿ ಕ್ಯಾರಕಾಸ್ನ ಉತ್ತರದಲ್ಲಿರುವ ಲಾ ಗುಯಿರಾ ಬಂದರು ಮೇಲೆಯೂ ಬಾಂಬ್ ದಾಳಿ ನಡೆದಿದೆ. ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ.