ವಾಷಿಂಗ್ಟನ್, ಜ.03 (DaijiworldNews/TA): ಹೊಸ ವರ್ಷದ ಮುನ್ನಾದಿನ ಉತ್ತರ ಕೆರೊಲಿನಾದಲ್ಲಿ ನಡೆಯಬೇಕಿದ್ದ ಐಸಿಸ್ ಪ್ರೇರಿತ ಭಯೋತ್ಪಾದಕ ದಾಳಿಯನ್ನು ಎಫ್ಬಿಐ ಯಶಸ್ವಿಯಾಗಿ ವಿಫಲಗೊಳಿಸಿದೆ. ದಾಳಿ ಸಂಚು ರೂಪಿಸಿದ್ದ ಅಪ್ರಾಪ್ತ ಯುವಕನನ್ನು ಬಂಧಿಸಲಾಗಿದೆ ಎಂದು ಎಫ್ಬಿಐ ಅಧಿಕೃತವಾಗಿ ತಿಳಿಸಿದೆ.

ಬಂಧಿತ ಆರೋಪಿಗೆ ಇನ್ನೂ 18 ವರ್ಷ ವಯಸ್ಸು ಆಗಿಲ್ಲ. ತನಿಖೆಯ ವೇಳೆ ಹೊಸ ವರ್ಷದ ಮುನ್ನಾ ದಿನ ದಾಳಿ ನಡೆಸುವ ಯೋಜನೆ ಹೊಂದಿದ್ದ ವಿಷಯ ಬೆಳಕಿಗೆ ಬಂದಿದೆ. ಆರೋಪಿಯು ವಿದೇಶದಲ್ಲಿರುವ ಐಸಿಸ್ ಸದಸ್ಯನೊಬ್ಬನೊಂದಿಗೆ ಸಂಪರ್ಕದಲ್ಲಿದ್ದು, ದಾಳಿ ನಡೆಸುವ ಕುರಿತು ಆತನಿಂದ ಸಲಹೆಗಳನ್ನು ಪಡೆದುಕೊಂಡಿದ್ದಾನೆ ಎಂದು ಎಫ್ಬಿಐ ತಿಳಿಸಿದೆ.
ಉತ್ತರ ಕೆರೊಲಿನಾದಲ್ಲಿ ಸಂಭವಿಸಬಹುದಾಗಿದ್ದ ಭಯೋತ್ಪಾದಕ ದಾಳಿಯನ್ನು ಎಫ್ಬಿಐ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆಯಿಂದ ತಡೆಯಲಾಗಿದೆ. ಐಸಿಸ್ ಸಂಘಟನೆ ನೇರವಾಗಿ ದಾಳಿಗೆ ಪ್ರೇರೇಪಿಸಿದ್ದೆಂಬುದಕ್ಕೂ ಸಾಕ್ಷ್ಯಗಳು ದೊರೆತಿವೆ ಎಂದು ಎಫ್ಬಿಐ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್, “ನಮ್ಮೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಿದ ಎಲ್ಲ ಕಾನೂನು ಜಾರಿ ಪಾಲುದಾರರಿಗೆ ಧನ್ಯವಾದಗಳು. ಅವರ ಸಮಯೋಚಿತ ಕ್ರಮದಿಂದ ಅಮಾಯಕ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿ ಚಾಕುಗಳು ಹಾಗೂ ಸುತ್ತಿಗೆಗಳನ್ನು ಬಳಸಿ ದಾಳಿ ನಡೆಸಲು ಯೋಜಿಸಿದ್ದಾನೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದಲೇ ದಾಳಿ ಸಂಚು ರೂಪಿಸುತ್ತಿದ್ದ ಆತ, ಅಮಾಯಕರನ್ನು ಕೊಂದು ಜಿಹಾದ್ ಸಾಧಿಸಲು ಮುಂದಾಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.