ಬರ್ಲಿನ್, ಜ. 02 (DaijiworldNews/AA): ಜರ್ಮನಿಯಲ್ಲಿರುವ ನಿವಾಸದಲ್ಲಿ ಅಗ್ನಿ ಅವಘಡ ಉಂಟಾಗಿ ಹೊಸ ವರ್ಷದಂದೇ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಆಘಾತ ಉಂಟಾಗಿದೆ.

ತಡರಾತ್ರಿ ಸಂಭವಿಸಿದ ಬೆಂಕಿ ಅಪಘಡದಲ್ಲಿ ತೆಲಂಗಾಣದ ಹೃತಿಕ್ ರೆಡ್ಡಿ(25) ಸಾವನ್ನಪ್ಪಿದ್ದಾರೆ.
ವೇಗವಾಗಿ ಹರಡುತ್ತಿದ್ದ ಬೆಂಕಿ ಮತ್ತು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಹೃತಿಕ್ ಬರ್ಲಿನ್ನ ಅಪಾರ್ಟ್ಮೆಂಟ್ನ ಮೇಲಿನ ಮಹಡಿಯಿಂದ ಹಾರಿದ್ದ. ಪರಿಣಾಮ ಆತನ ತಲೆಗೆ ತೀವ್ರ ಪೆಟ್ಟಾಗಿತ್ತು. ಹೃತಿಕ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹೊಸ ವರ್ಷದ ದಿನದಂದೇ ಈ ಅವಘಡ ಸಂಭವಿಸಿದೆ. ತೆಲಂಗಾಣದ ಜನಗಾಂವ್ ಜಿಲ್ಲೆಯ ಮಲ್ಕಾಪುರ್ ಗ್ರಾಮದಲ್ಲಿರುವ ಕುಟುಂಬಸ್ಥರಲ್ಲಿ, ಹೃತಿಕ್ ಅಕಾಲಿಕ ಮರಣದಿಂದ ದುಃಖಿತರಾಗಿದ್ದಾರೆ.
ಹೃತಿಕ್ ರೆಡ್ಡಿ ಯುರೋಪ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆಯಲು 2023 ರ ಜೂನ್ನಲ್ಲಿ ಜರ್ಮನಿಯ ಮ್ಯಾಗ್ಡೆಬರ್ಗ್ಗೆ ತೆರಳಿದ್ದರು. 2022 ರಲ್ಲಿ ವಾಗ್ದೇವಿ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಪದವಿ ಪಡೆದಿದ್ದರು.
ತೆಲಂಗಾಣದಲ್ಲಿರುವ ಹೃತಿಕ್ ಅವರ ಕುಟುಂಬ ಮತ್ತು ಸ್ನೇಹಿತರು ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಜರ್ಮನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ತವರಿಗೆ ತರುವ ಪ್ರಕ್ರಿಯೆಯಲ್ಲಿದ್ದಾರೆ.