ಇಸ್ಲಾಮಾಬಾದ್, ಜ.01 (DaijiworldNews/TA): ಹೊಸ ವರ್ಷಕ್ಕೆ ಶುಭಾಶಯ ಹೇಳುವ ಬದಲು, ಪಾಕಿಸ್ತಾನವು ಬೆದರಿಕೆಯ ಧಾಟಿಯನ್ನೇ ಮುಂದುವರಿಸಿದೆ. ಭಾರತದ ವಿರುದ್ಧದ ವೈರಾಗ್ಯದಲ್ಲಿ ಯಾವುದೇ ಬದಲಾವಣೆ ಕಾಣಿಸದೆ, ಪಾಕಿಸ್ತಾನ ಹೊಸ ವರ್ಷವನ್ನು ಆಕ್ರಮಣಕಾರಿ ನಿಲುವಿನೊಂದಿಗೆ ಆರಂಭಿಸಿರುವುದು ಸ್ಪಷ್ಟವಾಗಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಭಾರತವನ್ನು ನೇರವಾಗಿ ಹೆಸರಿಸದಿದ್ದರೂ, ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟಾದರೆ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ತನ್ನ ಭದ್ರತೆಗಾಗಿ ಯಾವುದೇ ಹಂತಕ್ಕೂ ಹೋಗಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಅಶಾಂತಿಯನ್ನು ನಿರ್ಮೂಲನೆ ಮಾಡಲು ಭದ್ರತಾ ಪಡೆಗಳು ಕಠಿಣ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿವೆ ಎಂದು ಮುನೀರ್ ತಿಳಿಸಿದರು. ಇದೇ ವೇಳೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಡ್ರೋನ್ಗಳ ಮೂಲಕ ಪಂಜಾಬ್ಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳುಹಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಡಿದ್ದಾರೆ.
ಗ್ರೆನೇಡ್ ದಾಳಿಗಳಂತಹ ಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಪಾಕಿಸ್ತಾನ ಪಂಜಾಬ್ ಅನ್ನು ಅಶಾಂತ ರಾಜ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಡಿಜಿಪಿ ಹೇಳಿದ್ದಾರೆ. ಗಡಿಯಾಚೆಯಿಂದ ಐಎಸ್ಐ ರೂಪಿಸಿದ ಪ್ರತಿಯೊಂದು ಪಿತೂರಿಯನ್ನು ಪಂಜಾಬ್ ಪೊಲೀಸರು ಯಶಸ್ವಿಯಾಗಿ ವಿಫಲಗೊಳಿಸುತ್ತಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ನಡೆದ ಗ್ರೆನೇಡ್ ದಾಳಿಗಳನ್ನು ಉಲ್ಲೇಖಿಸಿದ ಅವರು, ಗಡಿ ರಾಜ್ಯದಲ್ಲಿ ಶಾಂತಿ ಕದಡಲು ಪಾಕಿಸ್ತಾನ ನಿರಂತರ ಯತ್ನಿಸುತ್ತಿದೆ. ಆದರೆ ಭದ್ರತಾ ಸಂಸ್ಥೆಗಳು ಸಂಪೂರ್ಣ ಜಾಗರೂಕರಾಗಿದ್ದು, ಪ್ರತಿಯೊಂದು ದುರುದ್ದೇಶವನ್ನೂ ತಟಸ್ಥಗೊಳಿಸುತ್ತಿವೆ ಎಂದು ಹೇಳಿದರು.
ಇತ್ತೀಚೆಗೆ ದೇಶದ ಸಶಸ್ತ್ರ ಪಡೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ರಕ್ಷಣಾ ಪಡೆಗಳ ಮುಖ್ಯಸ್ಥ (CDF) ಆಗಿ ನೇಮಕಗೊಂಡ ಅಸಿಮ್ ಮುನೀರ್, ಗುಜ್ರಾನ್ವಾಲಾ ಮತ್ತು ಸಿಯಾಲ್ಕೋಟ್ ಗ್ಯಾರಿಸನ್ಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಅಧಿಕಾರಿಗಳು ಹಾಗೂ ಸೈನಿಕರೊಂದಿಗೆ ಸಂವಾದ ನಡೆಸಿ, ಅವರ ಉನ್ನತ ಮನೋಬಲ ಮತ್ತು ರಾಷ್ಟ್ರೀಯ ಭದ್ರತೆಗೆ ಇರುವ ಬದ್ಧತೆಯನ್ನು ಶ್ಲಾಘಿಸಿದರು. ಜೊತೆಗೆ ಕಠಿಣ ಹಾಗೂ ಮಿಷನ್-ಆಧಾರಿತ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು.