ಆಕ್ಲೆಂಡ್, ಡಿ. 31 (DaijiworldNews/TA): ವಿಶ್ವದಾದ್ಯಂತ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ನ್ಯೂಜಿಲೆಂಡ್ 2026ರ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದೆ. ನ್ಯೂಜಿಲೆಂಡ್ನ ಆಕ್ಲೆಂಡ್ ನಗರವು ಕಿರಿಬಾಟಿ ನಂತರ ಹೊಸ ವರ್ಷವನ್ನು ಬರಮಾಡಿಕೊಂಡ ವಿಶ್ವದ ಮೊದಲ ಪ್ರಮುಖ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಕ್ಲೆಂಡ್ನ ಸ್ಕೈ ಟವರ್ನಲ್ಲಿ ನಡೆದ ಅದ್ಭುತ ಪಟಾಕಿ ಪ್ರದರ್ಶನ ಹೊಸ ವರ್ಷದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು. ಸುಮಾರು ಐದು ನಿಮಿಷಗಳ ಕಾಲ 3,500ಕ್ಕೂ ಹೆಚ್ಚು ಪಟಾಕಿಗಳನ್ನು ಸಿಡಿಸುವ ಮೂಲಕ ರೋಮಾಂಚನಕಾರಿ ದೃಶ್ಯಾವಳಿಗೆ ಜನರು ಸಾಕ್ಷಿಯಾದರು. ಆಕಾಶವಿಡಿಯ ಬೆಳಕಿನಲ್ಲಿ ಸ್ಕೈ ಟವರ್ ಮಿಂಚಿದ ದೃಶ್ಯ ನ್ಯೂಜಿಲೆಂಡ್ವ್ಯಾಪಿ ಸಂಭ್ರಮವನ್ನು ಹೆಚ್ಚಿಸಿತು.
ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 4:30ಕ್ಕೆ ಆಕ್ಲೆಂಡ್ನಲ್ಲಿ 2026ರ ಹೊಸ ವರ್ಷ ಆರಂಭವಾಯಿತು. ಭಾರತದ ಕಾಲಮಾನಕ್ಕಿಂತ ಸುಮಾರು 7 ಗಂಟೆ 30 ನಿಮಿಷ ಮುಂಚಿತವಾಗಿಯೇ ನ್ಯೂಜಿಲೆಂಡ್ ಹೊಸ ವರ್ಷವನ್ನು ಆಚರಿಸುತ್ತದೆ. ನ್ಯೂಜಿಲೆಂಡ್ ಹೊಸ ವರ್ಷವನ್ನು ಸ್ವಾಗತಿಸಿದ ಸುಮಾರು ಎರಡು ಗಂಟೆಗಳ ಬಳಿಕ ಆಸ್ಟ್ರೇಲಿಯಾದ ಪೂರ್ವ ಕರಾವಳಿ ನಗರಗಳಲ್ಲೂ 2026ರ ಹೊಸ ವರ್ಷದ ಸಂಭ್ರಮ ಆರಂಭವಾಗಲಿದೆ. ಈ ಮೂಲಕ ವಿಶ್ವದ ವಿವಿಧ ಭಾಗಗಳಲ್ಲಿ ಕ್ರಮೇಣ ಹೊಸ ವರ್ಷದ ಸಂಭ್ರಮ ಹರಡುತ್ತಿದೆ.