ಬಾಂಗ್ಲಾದೇಶ, ಡಿ. 31 (DaijiworldNews/TA): ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ಮುಖ್ಯಸ್ಥೆ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗವಹಿಸಿ ಗೌರವ ಸಲ್ಲಿಸಿದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಲೀದಾ ಜಿಯಾ ಮಂಗಳವಾರ 80ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಅಗಲಿಕೆಯಿಂದ ಬಾಂಗ್ಲಾದೇಶ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ಆವರಿಸಿದೆ. ಹಲವು ದಶಕಗಳ ಕಾಲ ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಲೀದಾ ಜಿಯಾ, ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು.
ರಾಷ್ಟ್ರೀಯ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಎನ್ಪಿ ಬೆಂಬಲಿಗರು ಸೇರಿದಂತೆ ವಿವಿಧ ಭಾಗಗಳಿಂದ ಜನರು ಢಾಕಾದ ಬೀದಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಾಜಧಾನಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ.
1981ರಲ್ಲಿ ಹತ್ಯೆಗೀಡಾದ ಮಾಜಿ ಅಧ್ಯಕ್ಷ ಹಾಗೂ ಖಲೀದಾ ಜಿಯಾ ಅವರ ಪತಿ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿಯೇ, ಶೇರ್-ಎ-ಬಾಂಗ್ಲಾ ನಗರದ ಜಿಯಾ ಉದ್ಯಾನ್ನಲ್ಲಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ದೇಶ-ವಿದೇಶಗಳಿಂದ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು. ಅಂತ್ಯಕ್ರಿಯೆಗೆ ಮುನ್ನ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಸಂತಾಪ ಪತ್ರವನ್ನು ಖಲೀದಾ ಜಿಯಾ ಅವರ ಪುತ್ರ ಹಾಗೂ ಬಿಎನ್ಪಿ ಕಾರ್ಯಕಾರಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರಿಗೆ ಹಸ್ತಾಂತರಿಸಿದರು.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, ಢಾಕಾಗೆ ತೆರಳಿ ತಾರಿಕ್ ರೆಹಮಾನ್ ಅವರನ್ನು ಭೇಟಿ ಮಾಡಿ ಪ್ರಧಾನಿ ಮೋದಿ ಅವರ ವೈಯಕ್ತಿಕ ಪತ್ರವನ್ನು ನೀಡಿರುವುದಾಗಿ ತಿಳಿಸಿದರು. ಭಾರತ ಸರ್ಕಾರ ಮತ್ತು ಭಾರತೀಯ ಜನರ ಪರವಾಗಿ ಸಂತಾಪ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಖಲೀದಾ ಜಿಯಾ ಅವರ ರಾಜಕೀಯ ದೃಷ್ಟಿಕೋನ ಮತ್ತು ಮೌಲ್ಯಗಳು ಭಾರತ–ಬಾಂಗ್ಲಾದೇಶ ನಡುವಿನ ಸಹಕಾರ ಹಾಗೂ ಅಭಿವೃದ್ಧಿ ಪಾಲುದಾರಿಕೆಗೆ ಮುಂದುವರಿದ ಮಾರ್ಗದರ್ಶನ ನೀಡಲಿವೆ ಎಂಬ ವಿಶ್ವಾಸವನ್ನು ಜೈಶಂಕರ್ ವ್ಯಕ್ತಪಡಿಸಿದ್ದಾರೆ.