ಬೀಜಿಂಗ್, ಡಿ. 31 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನ ಹಾಗೂ ಭಾರತದ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಚೀನಾ ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾವೇ ಎಂದು ಹೇಳಿಕೊಂಡಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, "ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆ ಶಮನಕ್ಕೆ ಚೀನಾ ಮಧ್ಯಸ್ಥಿಕೆ ವಹಿಸಿತು. ಸಮಸ್ಯೆಯನ್ನು ಪರಿಹರಿಸಲು ನ್ಯಾಯಯುತ ನಿಲುವು ಅಳವಡಿಸಿಕೊಂಡಿದೆ" ಎಂದು ಹೇಳಿದ್ದಾರೆ.
"ಎರಡನೇ ಮಹಾಯುದ್ಧದ ನಂತರ ಇತ್ತೀಚೆಗೆ ಹೆಚ್ಚಾಗಿ ಸ್ಥಳೀಯ ಯುದ್ಧಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳು ಭುಗಿಲೆದ್ದವು. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹರಡುತ್ತಲೇ ಇತ್ತು. ಶಾಶ್ವತವಾದ ಶಾಂತಿಯನ್ನು ನಿರ್ಮಿಸಲು, ನಾವು ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವನ್ನು ತೆಗೆದುಕೊಂಡಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
"ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಚೀನಾದ ಈ ವಿಧಾನವನ್ನು ಅನುಸರಿಸಿ ನಾವು ಉತ್ತರ ಮ್ಯಾನ್ಮಾರ್, ಇರಾನಿನ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಉದ್ವಿಗ್ನತೆ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ" ಎಂದಿದ್ದಾರೆ.
ಇನ್ನು ಸಂಭಾವ್ಯ ಯುದ್ಧವನ್ನು ನಿಲ್ಲಿಸಲು ಅಮೆರಿಕ ಮಧ್ಯಪ್ರವೇಶಿಸಿತು ಎಂದು ಟ್ರಂಪ್ ಪದೇ ಪದೇ ಹೇಳಿಕೆ ನೀಡಿದ್ದರು. ಭಾರತ ಕೂಡ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ದೃಢವಾಗಿ ತಿರಸ್ಕರಿಸಿತ್ತು. ನೇರ ದ್ವಿಪಕ್ಷೀಯ ಸಂವಹನದ ಮೂಲಕ ಕದನ ವಿರಾಮವನ್ನು ಸಾಧಿಸಲಾಗಿದೆ ಎಂದು ಭಾರತ ಸ್ಪಷ್ಟನೆ ನೀಡಿತ್ತು.