ಢಾಕಾ,ಡಿ. 30 (DaijiworldNews/TA): ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ನಾಯಕಿ ಖಲೀದಾ ಜಿಯಾ (80) ಅವರು ಮಂಗಳವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನವೆಂಬರ್ 23ರಂದು ಎದೆಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಿದ್ದರಿಂದ ನಾಲ್ಕು ದಿನಗಳ ಬಳಿಕ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು, ಸಿಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಕಳೆದ 36 ದಿನಗಳಿಂದ ಅವರು ತೀವ್ರ ನಿಗಾದಲ್ಲಿ ಇದ್ದರು.
ದಿವಂಗತ ಪ್ರಧಾನಿ ಜಿಯಾವುರ್ ರೆಹಮಾನ್ ಅವರ ಪತ್ನಿಯಾದ ಖಲೀದಾ ಜಿಯಾ ಅವರು ದೀರ್ಘಕಾಲದಿಂದ ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ, ಸಂಧಿವಾತ ಹಾಗೂ ಕಣ್ಣಿನ ತೊಂದರೆಗಳು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ನಾಲ್ಕು ತಿಂಗಳ ವೈದ್ಯಕೀಯ ಚಿಕಿತ್ಸೆಯ ಬಳಿಕ ಮೇ 6ರಂದು ಲಂಡನ್ನಿಂದ ಬಾಂಗ್ಲಾದೇಶಕ್ಕೆ ಮರಳಿದ್ದರು.
ಅವರ ಚಿಕಿತ್ಸೆಯನ್ನು ಹೃದ್ರೋಗ ತಜ್ಞ ಶಹಾಬುದ್ದೀನ್ ತಾಲೂಕ್ದರ್ ಅವರ ನೇತೃತ್ವದ ವೈದ್ಯಕೀಯ ಮಂಡಳಿ ನೋಡಿಕೊಳ್ಳುತ್ತಿದ್ದು, ಬಾಂಗ್ಲಾದೇಶದ ಜೊತೆಗೆ ಯುಕೆ, ಅಮೆರಿಕ, ಚೀನಾ ಮತ್ತು ಆಸ್ಟ್ರೇಲಿಯಾದ ತಜ್ಞರು ಮೇಲ್ವಿಚಾರಣೆ ವಹಿಸಿದ್ದರು. ಈ ತಿಂಗಳ ಆರಂಭದಲ್ಲಿ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ನಿರ್ಧಾರ ಕೈಗೊಳ್ಳಲಾಗಿದ್ದರೂ, ಅವರ ದುರ್ಬಲ ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಿರಲಿಲ್ಲ.
ಖಲೀದಾ ಜಿಯಾ ಅವರು 15 ಆಗಸ್ಟ್ 1945ರಂದು ಜನಿಸಿದ್ದು, 1991ರಿಂದ 1996ರವರೆಗೆ ಮತ್ತು ಮತ್ತೆ 2001ರಿಂದ 2006ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ಬೆನಜೀರ್ ಭುಟ್ಟೋ ಬಳಿಕ ಮುಸ್ಲಿಂ ಜಗತ್ತಿನ ಎರಡನೇ ಮಹಿಳಾ ಪ್ರಧಾನಿಯಾಗಿದ್ದರು. ಅವರ ಹಿರಿಯ ಪುತ್ರ ಹಾಗೂ ಬಿಎನ್ಪಿ ಅಧ್ಯಕ್ಷ ತಾರಿಕ್ ರೆಹಮಾನ್ 2008ರಿಂದ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಕಿರಿಯ ಪುತ್ರ ಅರಾಫತ್ ರೆಹಮಾನ್ 2025ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ, ಆಗಸ್ಟ್ 5, 2024ರಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಆಗಿನ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿತು. ಅನಂತರ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಬಿಎನ್ಪಿ ಪ್ರಮುಖ ಪಾತ್ರ ವಹಿಸಿಕೊಂಡಿದೆ. ಖಲೀದಾ ಜಿಯಾ ಅವರ ನಿಧನದಿಂದ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.