ತೈವಾನ್, ಡಿ. 28 (DaijiworldNews/TA): ತೈವಾನ್ನ ಈಶಾನ್ಯ ಕರಾವಳಿ ನಗರ ಯಿಲಾನ್ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿ ಶನಿವಾರ ಬೆಳಿಗ್ಗೆ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತೈವಾನ್ ಹವಾಮಾನ ಇಲಾಖೆ ತಿಳಿಸಿದೆ.

ಭೂಕಂಪದ ತೀವ್ರತೆಯಿಂದ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ನಡುಗಿರುವುದು ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಅನಿಲ ಸೋರಿಕೆ ಪ್ರಕರಣಗಳು ಕಂಡುಬಂದಿದ್ದು, ಕಟ್ಟಡಗಳಿಗೆ ಸಣ್ಣ ಪ್ರಮಾಣದ ಹಾನಿಯೂ ಸಂಭವಿಸಿದೆ. ತೈವಾನ್ ಪವರ್ ಕಂಪನಿಯ ಮಾಹಿತಿ ಪ್ರಕಾರ, ಯಿಲಾನ್ ಪ್ರದೇಶದಲ್ಲಿ 3,000 ಕ್ಕೂ ಹೆಚ್ಚು ಮನೆಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ತುರ್ತು ಸೇವಾ ತಂಡಗಳು ತಕ್ಷಣ ಕಾರ್ಯಾಚರಣೆ ಆರಂಭಿಸಿ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿವೆ.
ತೈವಾನ್ ಭೂಕಂಪಗಳಿಗೆ ಹೆಚ್ಚು ಒಳಗಾಗುವ ಪ್ರದೇಶವಾಗಿದ್ದು, 2016ರಲ್ಲಿ ದಕ್ಷಿಣ ತೈವಾನ್ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದೇ ರೀತಿ, 1999ರಲ್ಲಿ ಸಂಭವಿಸಿದ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಪ್ರಸ್ತುತ ಭೂಕಂಪದಿಂದ ಯಾವುದೇ ದೊಡ್ಡ ಪ್ರಮಾಣದ ಪ್ರಾಣಾಪಾಯದ ವರದಿಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.