ಅಮೇರಿಕಾ, ಡಿ. 22 (DaijiworldNews/AK): ಪ್ರತಿಯೊಂದು ದೇಶವು ತನ್ನದೇ ಆದ ನಿಯಮಗಳನ್ನ ರೂಪಿಸಿದೆ. ಅದೇ ರೀತಿ ಇದೀಗ ಅಮೆರಿಕ ಬರ್ತ್ ಟೂರಿಸಂ ಅನ್ನು ನಿಷೇಧಿಸಿ ನಿಯಮವೊಂದನ್ನು ತರಲು ಮುಂದಾಗಿದೆ. ಅಮೆರಿಕಕ್ಕೆ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಕೂಡ ವಿಭಿನ್ನ ನಿಯಮಗಳಿವೆ. ಆದರೂ ಕೂಡ ಅಮೆರಿಕ ಪೌರತ್ವ ಪಡೆಯುವ ಉದ್ದೇಶದಿಂದ ಅಲ್ಲಿಗೆ ಹೋಗುವ ಪ್ರವಾಸಿಗರು ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅಮೆರಿಕ ಸರ್ಕಾರ ಎಚ್ಚೆತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಮುಂದಾಗಿದೆ.

ಗರ್ಭಿಣಿಯರು ಹೆರಿಗೆಗೂ ಮುನ್ನ ಅಮೆರಿಕಕ್ಕೆ ತೆರಳಿ, ಅಲ್ಲಿ ಮಗುವಿಗೆ ಜನ್ಮ ನೀಡಿದಾಗ ಆ ಮಗುವಿಗೆ ಅಮೆರಿಕಾದ ಪೌರತ್ವ ಸಿಗುತ್ತದೆ. ಈ ಉದ್ದೇಶವನ್ನಿಟ್ಟುಕೊಂಡು ಅಮೆರಿಕಕ್ಕೆ ಪ್ರಯಾಣಿಸುವುದನ್ನ ಬರ್ತ್ ಟೂರಿಸಂ ಎನ್ನುತ್ತಾರೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಸಾ ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಸಮರ ಸಾರಿದ್ದಾರೆ. ಕಳೆದ ವಾರ ದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಛೇರಿ ಪ್ರವಾಸಿ ವೀಸಾ ಪಡೆದುಕೊಳ್ಳಲು ಇಚ್ಚಿಸುವ ಭಾರತೀಯ ಅರ್ಜಿದಾರರಿಗೆ ಎಚ್ಚರಿಕೆ ನೀಡಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಅಮೆರಿಕಕ್ಕೆ ಪ್ರಯಾಣಿಸಲು ಬಯಸುವವರಿಗೆ ಅಂದರೆ ತಕ್ಷಣದ ವೀಸಾ ಪಡೆಯುವವರ ಅರ್ಜಿಗಳನ್ನು ನಿರಾಕರಿಸಲಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದೆ.
ಸಾಮಾನ್ಯವಾಗಿ ಹೆರಿಗೆಗೂ ಮುನ್ನ ಅಮೆರಿಕಕ್ಕೆ ತೆರಳುವ ಪ್ರಯಾಣಿಕರು ಯುಎಸ್ ಸಂದರ್ಶಕ ವಿಸಾದಡಿಯಲ್ಲಿ ಬರುವುದಿಲ್ಲ. ಹೀಗಾಗಿ ನಿಜವಾಗಿಯೂ ಅಮೆರಿಕಕ್ಕೆ ಪ್ರಯಾಣದ ಅಥವಾ ಪ್ರವಾಸದ ಉದ್ದೇಶದಿಂದ ತೆರಳುವವರಿಗೆ ಮಾತ್ರ ಸಂದರ್ಶಕ ವೀಸಾ ನೀಡಲಾಗುವುದು. ಬದಲಿಗೆ ಪೌರತ್ವ ಪಡೆಯುವ ಉದ್ದೇಶದಿಂದ ಪ್ರಯಾಣಿಸುವವರಿಗೆ ಈ ವೀಸಾಗಳನ್ನು ನೀಡುವುದಿಲ್ಲ. ಈ ಹಿನ್ನೆಲೆ ಅಧಿಕಾರಿಗಳು ವೀಸಾ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ ಎಂದು ರಾಯಭಾರಿ ಕಚೇರಿ ತಿಳಿಸಿದೆ.
ಸಂದರ್ಶಕ ವೀಸಾ ಅರ್ಜಿಗಳನ್ನು ಪರಿಶೀಲಿಸುವಾಗ ಒಂದು ವೇಳೆ ಈ ಅರ್ಜಿ ಪೌರತ್ವ ಪಡೆಯುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಈ ರೀತಿ ಪೌರತ್ವ ಪಡೆಯಲು ಅನುಮತಿ ಇಲ್ಲ ಎಂದಿದೆ.