ಬ್ರೆಜಿಲ್, ಡಿ. 16 (DaijiworldNews/TA): ದಕ್ಷಿಣ ಬ್ರೆಜಿಲ್ನ ಗುವಾಯ್ಬಾ ನಗರದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದು, ಬಲವಾದ ಗಾಳಿಗೆ ಲಿಬರ್ಟಿ ಪ್ರತಿಮೆಯ ಪ್ರತಿಕೃತಿ ನೆಲಕ್ಕುರುಳಿ ಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಬಿದ್ದಿರುವುದು ಅಮೆರಿಕದ ನ್ಯೂಜರ್ಸಿಯಲ್ಲಿ ಇರುವ ಪ್ರಸಿದ್ಧ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಇದನ್ನು 2020ರಲ್ಲಿ ಗುವಾಯ್ಬಾದಲ್ಲಿ ಸ್ಥಾಪಿಸಲಾಗಿತ್ತು. ಚಂಡಮಾರುತದ ವೇಳೆ ಗಂಟೆಗೆ ಸುಮಾರು 80ರಿಂದ 90 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದರಿಂದ ಪ್ರತಿಮೆ ಮೊದಲಿಗೆ ಓರೆಯಾಗಿ, ಬಳಿಕ ಸಮೀಪದ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ.
ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭವು ಬಲಿಷ್ಠವಾಗಿಯೇ ಉಳಿದಿದ್ದು, ಮುಖ್ಯ ಪ್ರತಿಮೆಯ ಭಾಗ ಮಾತ್ರ ಉರುಳಿದೆ. ಘಟನೆ ಸಂಭವಿಸಿದ ತಕ್ಷಣ ಅಲ್ಲಿದ್ದ ಅಂಗಡಿ ಸಿಬ್ಬಂದಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಯಾವುದೇ ಪ್ರಾಣಹಾನಿ , ಗಾಯಗಳ ವರದಿಯಾಗಿಲ್ಲ. ಸ್ಥಳೀಯ ಆಡಳಿತವು ಹಾನಿಯ ಬಗ್ಗೆ ಚರ್ಚಿಸುತ್ತಿದ್ದು, ಚಂಡಮಾರುತದಿಂದ ಉಂಟಾದ ಪರಿಣಾಮಗಳ ಬಗ್ಗೆ ಪರಿಶೀಲನೆ ಮುಂದುವರಿದಿದೆ.