ಜೋರ್ಡಾನ್, ಡಿ. 16 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ಜೋರ್ಡಾನ್ನ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರನ್ನು ಅಮ್ಮನ್ನ ಹುಸೇನಿಯಾ ಅರಮನೆಯಲ್ಲಿ ಭೇಟಿ ಮಾಡಿ, ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ ಅಬ್ದುಲ್ಲಾ II ಅವರ ದೃಢ ನೇತೃತ್ವದಲ್ಲಿ ಜೋರ್ಡಾನ್ ದೇಶವು ಭಯೋತ್ಪಾದನೆ, ಉಗ್ರವಾದ ಹಾಗೂ ಮೂಲಭೂತವಾದದ ವಿರುದ್ಧ ಬಲವಾದ ಮತ್ತು ಕಾರ್ಯತಂತ್ರದ ಸಂದೇಶವನ್ನು ಜಾಗತಿಕ ಸಮುದಾಯಕ್ಕೆ ರವಾನಿಸಿದೆ ಎಂದು ಶ್ಲಾಘಿಸಿದರು.
“2018ರಲ್ಲಿ ನೀವು ಭಾರತಕ್ಕೆ ಭೇಟಿ ನೀಡಿದಾಗ, ನಾವು ಇಸ್ಲಾಮಿಕ್ ಪರಂಪರೆ ಕುರಿತು ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದೆವು. ಅದಕ್ಕೂ ಮುನ್ನ, 2015ರಲ್ಲಿ ವಿಶ್ವಸಂಸ್ಥೆಯ ಸಭೆಯ ಸಂದರ್ಭದಲ್ಲಿ ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವ ಕುರಿತು ಕೇಂದ್ರೀಕರಿಸಿದ ಕಾರ್ಯಕ್ರಮದಲ್ಲಿ ನಮ್ಮ ಮೊದಲ ಭೇಟಿಯೂ ನಡೆದಿತ್ತು. ಆಗಲೂ ನೀವು ಈ ವಿಷಯದಲ್ಲಿ ಸ್ಪೂರ್ತಿದಾಯಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ” ಎಂದು ಪ್ರಧಾನಿ ಮೋದಿ ಸ್ಮರಿಸಿದರು.
ಈ ಸಭೆಯ ವೇಳೆ ಭಾರತ–ಜೋರ್ಡಾನ್ ನಡುವಿನ ಸ್ನೇಹಪರ ಸಂಬಂಧಗಳು, ಪ್ರಾದೇಶಿಕ ಶಾಂತಿ, ಭದ್ರತೆ ಹಾಗೂ ಉಗ್ರವಾದ ವಿರೋಧಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆದವು.