ಥೈಲ್ಯಾಂಡ್, ಡಿ. 08 (DaijiworldNews/AK):ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಥೈಲ್ಯಾಂಡ್, ಕಾಂಬೋಡಿಯಾ ಎರಡೂ ದೇಶಗಳೂ ಮುರಿದಿವೆ. ಥೈಲ್ಯಾಂಡ್ ಕಾಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಥಾಯ್ ಮಿಲಿಟರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪೂರ್ವ ಪ್ರಾಂತ್ಯದ ಉಬೊನ್ ರಾಟ್ಚಥಾನಿಯ ಎರಡು ಪ್ರದೇಶಗಳಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಥಾಯ್ ಸೇನೆಯ ಹೇಳಿಕೆ ತಿಳಿಸಿದೆ. ತನ್ನ ಪಡೆಗಳು ಕಾಂಬೋಡಿಯಾದಿಂದ ಗುಂಡಿನ ದಾಳಿಗೆ ಒಳಗಾದವು ಎಂದು ಸೇನೆಯು ತಿಳಿಸಿದೆ, ಇದರಿಂದಾಗಿ ಹಲವಾರು ಮಿಲಿಟರಿ ಸ್ಥಾನಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.
ಕಾಂಬೋಡಿಯಾದ ರಕ್ಷಣಾ ಸಚಿವಾಲಯವು ಇಂದು ಬೆಳಗ್ಗೆ ಥಾಯ್ ಪಡೆಗಳು ತನ್ನ ಎರಡು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದೆ. ಕಳೆದ ಹಲವಾರು ದಿನಗಳಿಂದ ಥಾಯ್ ಪಡೆಗಳು ಪ್ರಚೋದನಕಾರಿ ಚಟುವಟಿಕೆಗಳನ್ನು ನಡೆಸುತ್ತಿವೆ ಮತ್ತು ಕಾಂಬೋಡಿಯನ್ ಪಡೆಗಳು ಪ್ರತೀಕಾರ ತೀರಿಸಿಕೊಂಡಿಲ್ಲ ಎಂದು ಸಚಿವಾಲಯ ಹೇಳಿಕೊಂಡಿದೆ.
ಅಕ್ಟೋಬರ್ನಲ್ಲಿ, ಕೌಲಾಲಂಪುರದಲ್ಲಿ ಎರಡೂ ದೇಶಗಳು ವಿಸ್ತೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಜುಲೈ ಸಂಘರ್ಷದಲ್ಲಿ 48 ಜನರು ಸಾವನ್ನಪ್ಪಿದ್ದರು ಮತ್ತು ತಾತ್ಕಾಲಿಕವಾಗಿ ಸುಮಾರು 300,000 ಜನರನ್ನು ಸ್ಥಳಾಂತರಿಸಲಾಗಿತ್ತು. ಆ ಸಮಯದಲ್ಲಿ ಎರಡೂ ದೇಶಗಳು ಭಾರೀ ಫಿರಂಗಿ ಮತ್ತು ರಾಕೆಟ್ ಗುಂಡಿನ ದಾಳಿ, ಪ್ರತಿದಾಳಿ ನಡೆದಿತ್ತು. ಒಬ್ಬ ಸೈನಿಕ ಗಾಯಗೊಂಡ ನಂತರ ಥಾಯ್ ಮಿಲಿಟರಿ ಒಪ್ಪಂದವನ್ನು ಸ್ಥಗಿತಗೊಳಿಸಿತು.
ನಾಲ್ಕು ಗಡಿ ಜಿಲ್ಲೆಗಳಿಂದ 385,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಮತ್ತು 35,000 ಕ್ಕೂ ಹೆಚ್ಚು ಜನರು ಈಗಾಗಲೇ ತಾತ್ಕಾಲಿಕ ಶಿಬಿರಗಳನ್ನು ತಲುಪಿದ್ದಾರೆ ಎಂದು ಥಾಯ್ ಮಿಲಿಟರಿ ವರದಿ ಮಾಡಿದೆ. 11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ.